ಬೆಳ್ತಂಗಡಿ: ತಾಲೂಕಿನ ಕನ್ಯಾಡಿ ಬಳಿಯ ದಲಿತ ಸಮುದಾಯಕ್ಕೆ ಸೇರಿದ ಬಡ ಕೂಲಿ ಕಾರ್ಮಿಕ ದಿನೇಶ್ ನಾಯ್ಕ್ ರವರ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಯುವ ದಲಿತ ಮುಖಂಡ, ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಭಿಷೇಕ್ ಬೆಳ್ಳಿಪ್ಪಾಡಿ ಹೇಳಿದರು.
ಸ್ಥಳಿಯ ಬಿಜೆಪಿ ನಾಯಕರೊಬ್ಬರ ಸಹೋದರನು ಈ ಕೊಲೆಯನ್ನು ಮಾಡಿದ್ದು, ದಲಿತ ಯುವಕನಿಗೆ ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿದ ಸಿಸಿ ಕ್ಯಾಮೆರಾ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಹರಿದಾಡುತ್ತಿದೆ. ಸ್ಥಳೀಯ ಶಾಸಕರಾಗಲಿ ಸರ್ಕಾರದ ಯಾವುದೇ ಒಬ್ಬ ಜನಪ್ರತಿನಿಧಿಯಾಗಲಿ ಇಷ್ಟರವರೆಗೆ ಮೃತ ದಿನೇಶ್ ಅವರ ಮನೆಗೆ ಭೇಟಿ ನೀಡದೆ ಇದರ ಬಗ್ಗೆ ಒಂದಕ್ಷರ ಮಾತನಾಡದೆ ಸುಮ್ಮನೆ ಕೈ ಕಟ್ಟಿ ಕುಳಿತಿರುವುದು ಹಿಂದೂಪರ ಎನ್ನುವ ಬಿಜೆಪಿ ಸರಕಾರದ ದಲಿತ ವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಪರಮಾಪ್ತನಾಗಿರುವ ಕೊಲೆಗಾರನ ಸಹೋದರನು ಅವರ ಮುಖಾಂತರ ತನಿಖೆಯ ದಿಕ್ಕು ತಪ್ಪಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾನೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಹಾಡಹಗಲೇ ಉತ್ತರ ಪ್ರದೇಶ ಮಾದರಿಯಲ್ಲಿ ದಲಿತ ಯುವಕನನ್ನು ಕೊಲೆ ಮಾಡಿದ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ಇಂತಹ ದಲಿತ ಸಮುದಾಯದ ಮೇಲಾಗುವ ದೌರ್ಜನ್ಯಗಳು ಮರುಕಳಿಸದಂತೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.