ವಿಟ್ಲ : ಕುಟುಂಬದವರಿಂದ ತಿರಸ್ಕೃತಗೊಂಡು ಭಿಕ್ಷೆ ಬೇಡುತ್ತಾ ಬಸ್ಸು ತಂಗುದಾಣದಲ್ಲಿ ಬದುಕುತ್ತಿದ್ದ ವೃದ್ಧೆಯನ್ನು ಪುಣಚ ಗ್ರಾಮದ ಮೂವರು ಯುವಕರು ದೈಗೋಳಿಯ ಸಾಯಿನಿಕೇತನ ಆಶ್ರಯತಾಣಕ್ಕೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಪುಣಚ ಗ್ರಾಮದ ಮಲ್ಯ ನಿವಾಸಿ ದಿ. ಕೃಷ್ಣನಾಯ್ಕರ ಪತ್ನಿ ಲಕ್ಷ್ಮಿ(60) ಮೂವರು ಯುವಕರ ಸಹಾಯದಿಂದ ಸಾಯಿನಿಕೇತನ ಆಶ್ರಮ ಪಡೆದವರು.
ಸ್ವಂತ ಜಮೀನು ಹೊಂದಿದ್ದ ಲಕ್ಷ್ಮಿಯವರು ಪತಿಯ ಮರಣದ ಬಳಿಕ ಕುಟುಂಬದವರಿಂದ ತಿರಸ್ಕೃತರಾಗಿದ್ದರಲ್ಲದೇ ತನ್ನ ಜಮೀನು ಕೂಡಾ ಅಕ್ರಮವಾಗಿ ಸಹೋದರಿಯ ಪಾಲಾಯಿತೆಂದು ಕಣ್ಣೀರಿಟ್ಟಿದ್ದಾರೆ. ರಕ್ತ ಸಂಬಂಧಿಗಳಿಂದಲೇ ತ್ಯಜಿಸಲ್ಪಟ್ಪ ವೃದ್ಧೆ ಲಕ್ಷ್ಮಿಯವರು ಹೊಟ್ಟೆ ಹಸಿವಿಗಾಗಿ ಕಂಡಕಂಡವರಲ್ಲಿ ಬೇಡುತ್ತಾ ಪುಣಚದ ಬಸ್ಸು ತಂಗುದಾಣದಲ್ಲಿ ದಿನಕಳೆಯುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪುಣಚದ ವೆಂಕಟ್ರಮಣ, ಪ್ರಕಾಶ್ ಮತ್ತು ಸಂತೋಷ್ ಎಂಬ ಮೂವರು ಯುವಕರು ದೈಗೋಳಿಯ ಸಾಯಿನಿಕೇತನ ಆಶ್ರಮದ ವ್ಯವಸ್ಥಾಪಕರನ್ನು ಸಂಪರ್ಕಿಸಿದ್ದಾರೆ. ಅವರೊಂದಿಗೆ ಮಾತುಕತೆ ನಡೆಸಿ ಅನಾಥೆಯಾಗಿದ್ದ ಲಕ್ಷ್ಮಿಯವರನ್ನು ಕರೆದೊಯ್ದು ಆಶ್ರಮಕ್ಕೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.