ವಿಟ್ಲ: ರಸ್ತೆ ಕಾಮಗಾರಿ ನಡೆಯದ ಬಗ್ಗೆ ಆಕ್ರೋಶಗೊಂಡ ಸ್ವಪಕ್ಷದ ಕಾರ್ಯಕರ್ತರು ಸೇತುವೆ ಉದ್ಘಾಟನೆಗೆ ಆಗಮಿಸಿದ ಶಾಸಕರ ಮುಂದೆ ಆಕ್ರೋಶ ವ್ಯಕ್ತಪಡಿಸಿದ ಹಾಗೂ ಎರಡೂ ಬಣಗಳ ನಡುವೆ ಮಾತಿನ ಚಕಮಕಿ ನಡೆದು, ಹೊಡೆದಾಟದ ಹಂತ ತಲುಪಿದ ಘಟನೆ ಪೆರುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಡಮಜಲು ಸೇತುವೆ ಸಮೀಪ ನಡೆದಿದೆ.
ಸ್ವ ಪಕ್ಷೀಯರ ಪರ ವಿರೋಧದ ಘರ್ಷಣೆ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮಾ.1 ರಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸಂಜೀವ ಮಠಂದೂರು ರವರು ಪೆರುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳ ಶಿಲಾನ್ಯಾಸ, ಉದ್ಘಾಟನೆಗೆ ತೆರಳಿದ್ದರು. ಈ ವೇಳೆ ಎಡಮಜಲು ಎಂಬಲ್ಲಿ ಸೇತುವೆ ನಿರ್ಮಾಣಗೊಂಡಿದ್ದು, ಅದರ ಉದ್ಘಾಟನೆ ನಿಗದಿಯಾಗಿತ್ತು. ಸೇತುವೆಯ ಮುಂದುವರೆದ ಭಾಗದ ರಸ್ತೆ ಕಾಂಕ್ರೀಟೀಕರಣಗೊಳ್ಳಬೇಕಿದ್ದು, ಈಗಾಗಲೇ 20 ಲಕ್ಷ ಅನುದಾನ ಮೀಸಲಾಗಿ, ಮಂಜೂರುಗೊಂಡಿತ್ತು. ಈ ನಡುವೆ ಈ ರಸ್ತೆ ಸಾಗುವ ಮಧ್ಯೆ ಖಾಸಗಿ ವ್ಯಕ್ತಿಯೋರ್ವರ ಜಮೀನು ಇದ್ದು, ತನ್ನ ಜಾಗದ ಮೂಲಕ ರಸ್ತೆ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಹಿಂದೆ ಜಾಗದ ಮಾಲಕರಾಗಿದ್ದವರು ಸ್ಥಳ ಕೊಡುವುದಾಗಿ ಒಪ್ಪಿದ್ದರು. ಈಗ ಜಾಗ ಖರೀದಿಸಿದವರು ರಸ್ತೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದ ಹಿನೆಲೆಯಲ್ಲಿ ರಸ್ತೆ ಕಾಮಗಾರಿ ನಡೆದಿಲ್ಲ ಎನ್ನಲಾಗಿದ್ದು, ಇದು ಬಣ ರಾಜಕೀಯಕ್ಕೆ ಕಾರಣವಾಗಿದ್ದು, ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಮತ್ತೊಂದು ಪಂಗಡದ ಬಿಜೆಪಿ ಕಾರ್ಯಕ್ರರ್ತರು ಎಡಮಜಲು ಸೇತುವೆ ಉದ್ಘಾಟನೆಗೆ ಬಂದಿದ್ದ ಶಾಸಕರನ್ನು ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೈವಸ್ಥಾನದವರೆಗೆ ರಸ್ತೆ ನಿರ್ಮಾಣ ಮಾಡಿದ ಬಳಿಕವೇ ಸೇತುವೆ ಉದ್ಗಾಟಿಸುವಂತೆ ಒತ್ತಾಯಿಸಿದ್ದು, ಇದೇ ವೇಳೆ ಎರಡೂ ಬಣದ ಬಿಜೆಪಿ ಕಾರ್ಯಕರ್ತರ ನಡುವೆ ಶಾಸಕರ ಎದುರೇ ಮಾತಿಗೆ ಮಾತು ಬೆಳೆದು ಹೊಡೆದಾಟದ ಹಂತ ತಲುಪಿತ್ತು. ಮಧ್ಯಪ್ರವೇಶಿಸಿದ ಶಾಸಕರು ಎರಡೂ ಕಡೆಯವರನ್ನು ಸಮಾಧಾನಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ, ಸಮಸ್ಯೆ ಬಗೆಹರಿಸುವಂತೆ ಸ್ಥಳೀಯ ಮುಖಂಡರಿಗೆ ಸೂಚನೆ ನೀಡಿದ್ದು, ಬಳಿಕ ಸೇತುವೆ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಪುಣಚ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹರಿಪ್ರಸಾದ್ ಯಾದವ್ ರವರು ಪ್ರತಿಕ್ರಿಯೆ ನೀಡಿ, ಸಣ್ಣ ಗೊಂದಲವಿದೆ ಅದನ್ನು ಮಾತುಕತೆಯಲ್ಲಿ ಪರಿಹರಿಸಿ, ಆ ಭಾಗದ ಅಭಿವೃದ್ಧಿ ಕಾರ್ಯಗಳನ್ನ ಮುಂದುವರೆಸುತ್ತೇವೆ. ಕಾರ್ಯಕರ್ತರಿಗೆ ಯಾವುದೇ ರೀತಿಯ ನೋವಾಗದ ರೀತಿಯಲ್ಲಿ ಗೊಂದಲವನ್ನು ಪರಿಸುತ್ತೇವೆ ಎಂದರು.