ಪುತ್ತೂರು: ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಾವಣೆ ಕಾರ್ಯದಲ್ಲಿ ಇವತ್ತಿನ ಅಂಕಿ ಅಂಶದ ಪ್ರಕಾರ ಜಿಲ್ಲೆಯಲ್ಲಿ ಪುತ್ತೂರು ಬ್ಲಾಕ್ ಪ್ರಥಮ ಸ್ಥಾನದಲ್ಲಿದೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸದಸ್ಯ ಅಭಿಯಾನದ ಉಸ್ತುವಾರಿಯಾಗಿರುವ ಮಂಗಳೂರು ಮಾಜಿ ಮೇಯರ್ ಮಹಾಬಲ ಮಾರ್ಲ ರವರು ಹೇಳಿದರು.
ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸದಸ್ಯತ್ವ ಅಭಿಯಾನದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು ಹಾಗೂ ಮಾರ್ಚ್ 19 ಕ್ಕೆ ಪುತ್ತೂರಿಗೆ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿಪಕ್ಷ ನಾಯಕರಾದ ಸಿದ್ದರಾಮಯ್ಯರವರು ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶಾಸಕಿ ಶಕುಂತಲಾ ಟಿ ಶೆಟ್ಟಿ ಕರೆ ನೀಡಿದರು.
ಮಾರ್ಚ್ 13 ರಂದು ಆದಿತ್ಯವಾರ ಒಂದು ದಿನ ಬೂತ್ ಮಟ್ಟದಲ್ಲಿ ಎಲ್ಲಾ ಕಾರ್ಯಕರ್ತರು ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಹಾಕಿಕೊಳ್ಳಲು ಕಾರ್ಯ ಯೋಜನೆ ಹಾಕಿ ಕೊಳ್ಳಲಾಗಿದೆ ಅಂದು ಬ್ಲಾಕ್ ಪದಾಧಿಕಾರಿಗಳು, ವಲಯ ಕಾಂಗ್ರೆಸ್ ಪದಾಧಿಕಾರಿಗಳು, ಮುಂಚೂಣಿ ಘಟಕದ ಪದಾಧಿಕಾರಿಗಳು ಬೂತ್ ಅಧ್ಯಕ್ಷರುಗಳು ತಮ್ಮ ತಮ್ಮ ಬೂತ್ ನಲ್ಲಿ ಆ ದಿನ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಹೇಳಿದರು.
ಸಭೆಯಲ್ಲಿ ಮಾತನಾಡಿದ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿ ಈಗ ಪುತ್ತೂರು ಬ್ಲಾಕ್ ಪ್ರಥಮ ಸ್ಥಾನದಲ್ಲಿದ್ದರು, ನಮಗೆ ಸಮಾಧಾನವಿಲ್ಲ ಬ್ಲಾಕ್ ಅಧ್ಯಕ್ಷರು 15,000 ಟಾರ್ಗೆಟ್ ಕೊಟ್ಟಿದ್ದಾರೆ ಅದನ್ನು ರೀಚ್ ಮಾಡಲು ನಾವೆಲ್ಲಾ ಇಂದೇ ಸಂಪೂರ್ಣವಾಗಿ ಸದಸ್ಯತ್ವ ನೋಂದಾವಣೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಅಮಲ ರಾಮ ಚಂದ್ರ ಸ್ವಾಗತಿಸಿದರು. ಪೂರ್ಣೇಶ್ ಭಂಡಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಶುಕೂರ್ ಹಾಜಿ, ಕಾರ್ಮಿಕ ಘಟಕದ ಅಧ್ಯಕ್ಷ ಶರೊನ್ ಸಿಕ್ವೆರಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ಅರಸ್, ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಸೀತಾ ಭಟ್, ಮಾಜಿ ನಗರ ಸಭಾ ಅಧ್ಯಕ್ಷೆ ಜಯಂತಿ ಬಲ್ನಾಡ್, ವಿಜಯಲಕ್ಷ್ಮಿ ಕೆ, ಮೈಮೂನತ್ ಮೆಹರಾ, ಎಸ್ ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ್, ಹಿಂದುಳಿದ ವರ್ಗದ ಅಧ್ಯಕ್ಷ ಹರೀಶ್ ಕೋಟ್ಯಾನ್, ಬ್ಲಾಕ್ ನ ಪದಾಧಿಕಾರಿಗಳು ಹಾಗೂ ವಲಯದ ಅಧ್ಯಕ್ಷರುಗಳು ಉಪಸ್ಥಿತರಿದ್ದರು.