ಬಂಟ್ವಾಳ: ರಿಕ್ಷಾದಲ್ಲಿ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಓರ್ವನನ್ನು ಬಂಟ್ವಾಳ ಠಾಣಾ ಪೊಲಿಸರು ಬಂಧಿಸಿದ್ದಾರೆ.
ಸಜೀಪ ನಡು ಗ್ರಾಮದ ಸಿದ್ದೀಕ್ ಯಾನೆ ಕೋಳಿ ಸಿದ್ದೀಕ್ ( 36) ಬಂಧಿತ ಆರೋಪಿ.
ಆರೋಪಿತನಿಂದ ಸುಮಾರು 80 ಸಾವಿರ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 2 ಸಾವಿರ ಮೌಲ್ಯದ ಗಾಂಜಾ, 60 ಸಾವಿರ ರೂ ಮೌಲ್ಯದ ರಿಕ್ಷಾ 1260 ನಗದು ಹಾಗೂ ಇತರ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಸಜೀಪ ಮೂಡ ಗ್ರಾಮದ ಬೇಂಕ್ಯೆ ಸಮೀಪದ ಬರ್ಕೆ ಎಂಬಲ್ಲಿ ಆರೋಪಿ ಗಾಂಜಾ ಮಾರಾಟ ಮಾಡುವ ಬಗ್ಗೆ ಪೊಲೀಸರಿಗೆ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ್ದಾರೆ.
ಆರೋಪಿ ಬರ್ಕೆ ಎಂಬಲ್ಲಿ ರಿಕ್ಷಾದಲ್ಲಿ ಗಾಂಜಾ ದಾಸ್ತಾನು ಇರಿಸಿ ಗಿರಾಕಿಗಳಿಗೆ ಮಾರಾಟಕ್ಕಾಗಿ ನಿಂತಿದ್ದ. ಪೊಲೀಸರು ಜೀಪ್ ನಲ್ಲಿ ಬರುವುದನ್ನು ಗಮನಿಸಿ ರಿಕ್ಷಾ ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಪೊಲೀಸರು ಈತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಆತನ ರಿಕ್ಷಾದಲ್ಲಿ ಇರಿಸಲಾಗಿದ್ದ ಗಾಂಜದ ಬಗ್ಗೆ ಮಾಹಿತಿ ನೀಡಿದ್ದಾನೆ. ಅಲ್ಲದೆ ಉಪ್ಪಳ ಕಡೆಯಿಂದ ಗಾಂಜಾವನ್ನು ತಂದು ಪ್ಯಾಕೆಟ್ ಗಳನ್ನಾಗಿ ಮಾಡಿ ಗಿರಾಕಿಗಳಿಗೆ ಮಾರಾಟ ಮಾಡುವ ಬಗ್ಗೆ ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮಂಗಳೂರು ಎಸ್.ಪಿ.ಹೃಷಿಕೇಶ್ ಸೋನಾವಣೆ ಹಾಗೂ ಬಂಟ್ವಾಳ ಡಿ.ವೈ.ಎಸ್.ಪಿ.ಪ್ರತಾಪ್ ಸಿಂಗ್ ಥೋರಾಟ್ ಅವರ ಮಾರ್ಗದರ್ಶನ ದಲ್ಲಿ ಬಂಟ್ವಾಳ ನಗರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ ಅವರ ನೇತೃತ್ವದಲ್ಲಿ ನಗರ ಠಾಣಾ ಎಸ್ .ಐ.ಅವಿನಾಶ್ ಅವರ ತಂಡ ಆರೋಪಿಯನ್ನು ಬಂಧಿಸಿದ್ದಾರೆ.