ಉಪ್ಪಿನಂಗಡಿ: ಹಿಜಾಬ್ ವಿಷಯವಾಗಿ ವಾಟ್ಸಪ್ ನಲ್ಲಿ ಶೇರ್ ಮಾಡಿದಕ್ಕೆ ಬಂದ ಬೆದರಿಕೆಗೆ ಮಣಿದು ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿ ಕೈಕಾಲುಗಳನ್ನು ಕಳೆದುಕೊಂಡ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಯುವಕನನ್ನು ಬೆದರಿಸಿ ಆತ್ಮಹತ್ಯೆಗೆ ಪ್ರಚೋದಿಸಿದವರ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿರೇಬಂಡಾಡಿ ಗ್ರಾಮದ ಮದ್ಮೆತ್ತಿಮಾರ್ ನಿವಾಸಿ ಪುರುಷೋತ್ತಮ ಯಾನೆ ಪ್ರಶಾಂತ್ (25) ಕೈ ಕಾಲುಗಳನ್ನು ಕಳೆದುಕೊಂಡ ಯುವಕ.
ಟ್ಯಾಂಕರ್ ಚಾಲಕನಾಗಿ ದುಡಿಯುತ್ತಿದ್ದ ಯುವಕ ಎ.1 ರಂದು ಬೆಳಿಗ್ಗೆ ಇಂದ್ರಾಳಿ ಬಳಿಯ ರೈಲ್ವೆ ಹಳಿಯಲ್ಲಿ ಪ್ರಜ್ಞಾಹೀನನಾಗಿ ಕೈ- ಕಾಲುಗಳನ್ನು ಕಳೆದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ.
ಕೆಲವು ದಿನಗಳ ಹಿಂದೆ ಕರ್ನಾಟಕ ಹೈಕೋರ್ಟ್ ಹಿಜಾಬ್ನ ವಿಷಯವಾಗಿ ನೀಡಿದ ತೀರ್ಪನ್ನು ಸ್ವಾಗತಿಸಿ, ಇದು ಸಂವಿಧಾನಬದ್ಧ ಎಂದು ವಾಟ್ಸಪ್ ನಲ್ಲಿ ಇದನ್ನು ಷೇರ್ ಮಾಡಿದ್ದೆ. ಇದಕ್ಕೆ ಎಂಆರ್ಪಿಎಲ್ನಲ್ಲಿ ಸ್ವಂತ ಟ್ಯಾಂಕರ್ ಹೊಂದಿ ವ್ಯವಹಾರ ನಡೆಸುತ್ತಿರುವ ಸಕಲೇಶಪುರದ ಲೋಹಿತ್ ಎಂಬವರು ಮಾ.29 ರಂದು ನನ್ನನ್ನು ಕರೆದು, ಹಿಜಾಬ್ ವಿಷಯವಾಗಿ ಬಾರಿ ಷೇರ್ ಮಾಡುತ್ತೀಯಾ ಎಂದು ಅವ್ಯಾಚ್ಯವಾಗಿ ನಿಂದಿಸಿ, ನೀನು ಟ್ಯಾಂಕರ್ ಬಿಡದ ಹಾಗೆ ನಿನ್ನ ಕೈ- ಕಾಲು ತುಂಡು ಮಾಡುತ್ತೇನೆ ಎಂದಿದ್ದಲ್ಲದೆ, ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾನೆ
ಮರುದಿನ ಸಂಜೆ ರೋಹಿತ್ ಅವರು ನನಗೆ ಕರೆ ಮಾಡಿದ್ದಲ್ಲದೆ, ಪರಿಚಯದ ಚಾಲಕರಾಗಿರುವ ಶಫೀಕ್ ಕೋಲ್ಪೆ, ಮೊಹಮ್ಮದ್ ಇಜಾಬ್, ಚಿದಾನಂದ, ಧನಂಜಯ, ಉಮೇಶ್ ಮತ್ತಿತರರು ಕೊಲೆ ಬೆದರಿಕೆ ಹಾಕಿದ್ದಾರೆ. ಇದರಿಂದ ಮನನೊಂದ ನಾನು ಮಾ.31ರಂದು ಮಣಿಪಾಲಕ್ಕೆ ತೆರಳಿ ಇಂದ್ರಾಳಿ ರೈಲ್ವೆ ನಿಲ್ದಾಣ ಬಳಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದರ ಪರಿಣಾಮ ನನ್ನ ಬಲ ಕಾಲು ಹಾಗೂ ಎಡ ಕೈಯನ್ನು ಕಳೆದುಕೊಂಡಿದ್ದೇನೆ” ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.