ಹಳೆಯಂಗಡಿ: ಮದುವೆ ಸಂಭ್ರಮದಲ್ಲಿದ್ದ ವಧು-ವರರು ವರನ ಮೊದಲ ಪತ್ನಿ ಮದುವೆ ಮಂಟಪಕ್ಕೆ ಆಗಮಿಸುತ್ತಿದ್ದಂತೆ ಪರಾರಿಯಾದ ಘಟನೆ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಪಣಂಬೂರು ಬಳಿ ನಡೆದಿದೆ.
ಖಾಸಗಿ ಬಸ್ ಚಾಲಕನಾಗಿರುವ ತೀರ್ಥಹಳ್ಳಿ ಮೂಲದ 40 ವರ್ಷದ ವ್ಯಕ್ತಿ ಮತ್ತು ಸಸಿಹಿತ್ಲು ಮೂಲದ ಯುವತಿಗೆ ಗುರುವಾರ ಮದುವೆ ನಿಶ್ಚಯವಾಗಿತ್ತು.
ಮದುವೆ ಹಾಲ್‌ನಲ್ಲಿ ಧಾರಾಕಾರ್ಯಕ್ಕೂ ಮುನ್ನ ವಧು-ವರರ ಫೋಟೋಶೂಟ್ ನಡೆಯುತ್ತಿತ್ತು. ಈ ವೇಳೆ ವರನ ಮೊದಲ ಪತ್ನಿ ಎಂದು ಹೇಳಿಕೊಂಡು ಮಹಿಳೆಯೊಬ್ಬಳು ಮಂಟಪಕ್ಕೆ ಆಗಮಿಸಿದ್ದಾಳೆ. ಅಲ್ಲದೆ, ಒಬ್ಬ ಗಂಡು ಮಗು ಇದೆ ಎಂದೂ ಆಕೆ ಹೇಳಿದ್ದರು. ಈ ವಿಷಯ ವರನ ಕಿವಿಗೆ ಬೀಳುತ್ತಿದ್ದಂತೆ ಫೋಟೋಶೂಟ್ ನಡೆಯುತ್ತಿದ್ದಲ್ಲಿಂದಲೇ ವಧುವನ್ನು ಕರೆದುಕೊಂಡು ಚಿನ್ನಾಭರಣ ಸಹಿತ ಕಾರಿನಲ್ಲಿ ಕುಳ್ಳಿರಿಸಿಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ವರನ ಕಡೆಯಿಂದ ಐವರು ಮಾತ್ರ ಮದುವೆಗೆ ಆಗಮಿಸಿದ್ದರು ಎನ್ನಲಾಗಿದ್ದು, ವರ ಈ ಹಿಂದೆ ಮದುವೆಯಾಗಿರುವ ವಿಷಯ ವಧುವಿಗೆ ತಿಳಿದಿತ್ತಾದರೂ, ಇಬ್ಬರು ಪ್ರೀತಿಸುತ್ತಿದ್ದರು. ಅಲ್ಲದೆ, ಆತ ಮೊದಲ ಪತ್ನಿಗೆ ವಿಚ್ಚೇದನ ನೀಡಲು ಅರ್ಜಿ ಹಾಕಿದ್ದಾನೆ ಎಂದೂ ತಿಳಿಸಿಲ್ಲ. ಯಾವುದೇ ವಿಚಾರವನ್ನು ವಧು ಮನೆಯಲ್ಲಿ ಹೇಳಿರಲಿಲ್ಲ ಎನ್ನಲಾಗಿದೆ. ಮೂಲ್ಕಿ ಪೊಲೀಸ್ ಠಾಣೆಗೆ ವಧುವಿನ ಪೋಷಕರು ತೆರಳಿ ಮಾಹಿತಿ ನೀಡಿದ್ದು, ಚಿನ್ನಾಭರಣ ಹಿಂತಿರುಗಿಸಿಕೊಡುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.