ಚೆನ್ನೈ: ಮಧುರೈ ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಮಂಗಳಮುಖಿಯಾದ ಡಾ. ಕಣ್ಣಮ್ಮ ಸ್ಪರ್ಧಿಸುತ್ತಿದ್ದಾರೆ. ದೇವಿಯ ವೇಷದ ಮೂಲಕ ಮತ ಕೇಳಲು ಮನೆಗಳಿಗೆ ತೆರಳುತ್ತಿದ್ದಾರೆ. ಭಾರತಿ ಕಣ್ಣಮ್ಮ ಅನ್ನುವ ಮಂಗಳಮುಖಿ ಹಲವು ಕನಸುಗಳ ಮೂಲಕ ಅಗ್ನಿಪರೀಕ್ಷೆಗೆ ಮುಂದಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತಿ ಕಣ್ಣಮ್ಮ, ಮಧುರೈಯನ್ನು ಮಾದರಿ ನಗರವಾಗಿ ಬದಲಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಮಗೆ (ಮಂಗಳಮುಖಿಯರಿಗೆ) ಕುಟುಂಬವಿಲ್ಲ. ಹೀಗಾಗಿ ನಾವು ಭ್ರಷ್ಟರಾಗುವುದಿಲ್ಲ. ಆದ್ದರಿಂದ ನನಗೆ ಮತ ಹಾಕಿ ಎಂದು ತಮಿಳು ಜನರಿಗೆ ಮನವಿ ಮಾಡುತ್ತಿದ್ದಾರೆ.
ಕಣ್ಣಮ್ಮ ಅವರು ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. 2014ರ ಲೋಕಸಭಾ ಚುನಾವಣೆಗೆ ಮಧುರೈ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 2019ರ ಲೋಕಸಭೆಗೆ ಚುನಾವಣೆಗೂ ಕಣ್ಣಮ್ಮ ನಾಮಪತ್ರ ಸಲ್ಲಿಸಿದ್ದರು. ಆದರೆ ಈ ನಾಮಪತ್ರ ಕೆಲ ಕಾರಣದಿಂದ ವಜಾಗೊಂಡಿತ್ತು. ಕಳೆದ ಎರಡು ಬಾರಿ ಸ್ಪರ್ಧಿಸಿದಾಗಲೂ ಕಣ್ಣಮ್ಮ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಇದೇ ಮೊದಲ ಬಾರಿಗೆ ಬಾರಿಗೆ ಅವರು ಮಧುರೈ ದಕ್ಷಿಣದಿಂದ ವಿಧಾನಸಭೆ ಚುನಾವಣೆಗೆ ನ್ಯೂ ಜನರೇಶನ್ ಪೀಪಲ್ಸ್ ಪಾರ್ಟಿಯಿಂದ ಕಣಕ್ಕಿಳಿದಿದ್ದಾರೆ. ಕಣ್ಣಮ್ಮ ಅವರು ಸಮಾಜಶಾಸ್ತ್ರದಲ್ಲಿ ಡಾಕ್ಟರೇಟ್ ಹಾಗೂ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಲ್ಲದೆ ಆರ್ಥಿಕತೆಯಲ್ಲಿ ಬಿಎ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್ ಡಿಪ್ಲೊಮಾ ಕೂಡ ಮಾಡಿದ್ದಾರೆ.