ಪುತ್ತೂರು :ಸುಳ್ಯ ಅಜ್ಜಾವರ ಗ್ರಾಮದ ಅಪ್ರಾಪ್ತ ಯುವತಿಯ ಜತೆ ಲೈಂಗಿಕ ದೌರ್ಜನ್ಯ ಎಸಗಿ ಯುವತಿ ಗರ್ಭವತಿಯಾಗಲು ಕಾರಣನಾದ ಯುವಕನ ವಿರುದ್ಧ ಯುವತಿಯ ಮನೆಯವರು ನೀಡಿದ ದೂರಿನ ಮೇರೆಗೆ ಸುಳ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಅರಿಯಡ್ಕ ನಿವಾಸಿ ಸಂದೀಪ (22) ಎಂದು ಗುರುತಿಸಲಾಗಿದೆ.
ಯುವತಿಗೆ ಯುವಕ ದೂರದ ಸಂಬಂಧಿಯಾಗಿದ್ದು ಅವರಿಬ್ಬರು ಕೆಲ ಸಮಯದಿಂದ ದೂರವಾಣಿ ಮೂಲಕ ಮಾತನಾಡುತ್ತಿದ್ದರು. ಕೆಲ ತಿಂಗಳ ಹಿಂದೆ ಯುವತಿಯ ದೊಡ್ಡಪ್ಪನ ಮನೆಯಲ್ಲಿ ಮಾರಿಪೂಜೆಗೆ ಸಂದೀಪ ಬಂದಿದ್ದು ರಾತ್ರಿ ವೇಳೆ ಅಪ್ರಾಪ್ತ ಯುವತಿಯ ಮೇಲೆ ಬಲಾತ್ಕಾರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದು ಈ ವಿಷಯ ಹೇಳಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದನೆಂದು ದೂರಿನಲ್ಲಿ ತಿಳಿಸಲಾಗಿದೆ.
ಜೂ.22 ರಂದು ಯುವತಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಆಕೆಯ ಅಕ್ಕ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸ್ಕ್ಯಾನಿಂಗ್ ನಡೆಸಿದ ಸಂದರ್ಭ ಆಕೆ ಗರ್ಭಿಣಿಯಾಗಿರುವುದು ತಿಳಿದು ಬದಿದೆ. ಆಕೆಯನ್ನು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದ್ದು ಬಳಿಕ ಪೋಲೀಸರಿಗೆ ದೂರು ನೀಡಲಾಗಿದೆ. ಜೂ.28 ರಂದು ಸಂದೀಪನ ಮೇಲೆ ಸುಳ್ಯ ಪೋಲೀಸ್ ಠಾಣೆಯಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ.