ಮುಂಬೈ: ಭಾರತದ ವಾರನ್ ಬಫೆಟ್ ಎಂದೇ ಖ್ಯಾತರಾಗಿದ್ದ ‘ಮನಿ ಮ್ಯಾಗ್ನೆಟ್’ ರಾಕೇಶ್ ಜುಂಜುನ್ವಾಲಾ (62) ನಿಧನ ಹೊಂದಿದ್ದಾರೆ.
ಉದ್ಯಮಿ ರಾಕೇಶ್ ಜುಂಜುನವಾಲಾ ಬಹುಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದರು. ಇಂದು ಬೆಳಗ್ಗೆ 6:30ಕ್ಕೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಐದು ಸಾವಿರ ರೂಪಾಯಿಂದ ಷೇರು ವಹಿವಾಟ ಆರಂಭಿಸಿದ ಇವರು 5.8 ಶತಕೋಟಿ ಡಾಲರ್ (ಸುಮಾರು 4 ಲಕ್ಷ ಕೋಟಿ ರೂ) ನಿವ್ವಳ ಆಸ್ತಿ ಹೊಂದಿದ್ದರು. ಭಾರತದ 36ನೇ ಶ್ರೀಮಂತ ವ್ಯಕ್ತಿ ಎಂದು ಕೂಡ ಇವರನ್ನು ಕರೆಯಲಾಗುತ್ತದೆ. ಷೇರು ಮಾರುಕಟ್ಟೆಯ ‘ಬಿಗ್ ಬುಲ್’ ಎಂದೇ ಖ್ಯಾತಿಯಾಗಿದ್ದರು. ಮಾಜಿ ಜೆಟ್ ಏರ್ವೇಸ್ ಸಿಇಓ ದುಬೆ ಮತ್ತು ಇಂಡಿಗೋ ಮಾಜಿ ಮುಖ್ಯಸ್ಥ ಆದಿತ್ಯ ಘೋಷ್ ಅವರೊಂದಿಗೆ ಸೇರಿ ಇತ್ತಿಚೇಗಷ್ಟೇ ಆಕಾಶ ಏರ್ಲೈನ್ಸ್ನ್ನು ಆರಂಭಿಸಿದ್ದರು.
ಜುಲೈ 5, 1960 ರಂದು ಜುಂಜುನ್ವಾಲಾ ಮುಂಬೈನಲ್ಲಿ ರಾಜಸ್ಥಾನಿ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಆದಾಯ ತೆರಿಗೆ ಆಯುಕ್ತರಾಗಿದ್ದರು. ರಾಕೇಶ್ ಸೈಡೆನ್ಹ್ಯಾಮ್ ಕಾಲೇಜಿನಿಂದ ಪದವಿ ಪಡೆದಿದ್ದು, ನಂತರ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದಲ್ಲಿ ಸೇರಿಕೊಂಡಿದ್ದರು.
ಅವರ ಖಾಸಗಿ ಒಡೆತನದ ಸ್ಟಾಕ್ ಟ್ರೇಡಿಂಗ್ ಫರ್ಮ್ ರೇರ್ ಎಂಟರ್ಪ್ರೈಸಸ್ ಅವರ ಮತ್ತು ಅವರ ಪತ್ನಿಯ ಮೊದಲ ಎರಡು ಅಕ್ಷರಗಳನ್ನು ಕಂಪನಿಗೆ ಹೆಸರನ್ನಾಗಿ ಇಡಲಾಗಿದೆ. ಟೈಟಾನ್, ಸ್ಟಾರ್ ಹೆಲ್ತ್, ಟಾಟಾ ಮೋಟಾರ್ಸ್ ಮತ್ತು ಮೆಟ್ರೋ ಬಾಂಡ್ಗಳು ಅವರ ದೊಡ್ಡ ಹಿಡುವಳಿಗಳಾಗಿವೆ.