ಮಂಗಳೂರು/ಉಡುಪಿ : ಹಲವು ದಿನಗಳ ವಿರಾಮದ ಬಳಿಕ ಕರಾವಳಿಯ ಹೆಚ್ಚಿನ ಕಡೆಗಳಲ್ಲಿ ಶನಿವಾರ ರಾತ್ರಿಯಿಂದ ಮತ್ತೆ ಮಳೆ ಚುರುಕುಗೊಂಡಿದೆ.
ಕರಾವಳಿಯಲ್ಲಿ ರವಿವಾರ ಸಾಧಾರಣ ಮಳೆಯಾಗಿದೆ. ದ.ಕ. ಜಿಲ್ಲೆಯ ವಿವಿಧೆಡೆ ಬೆಳಗ್ಗೆ ದಟ್ಟ ಮೋಡ ಆವರಿಸಿ ಉತ್ತಮ ಮಳೆಯ ಮುನ್ಸೂಚನೆ ನೀಡಿತು. ಬಳಿಕ ಮೋಡಗಳು ದುರ್ಬಲವಾಗಿ ಆಗಾಗ್ಗೆ ಸಾಧಾರಣ ಮಳೆಯಾಗಿದೆ. ಮಂಗಳೂರು, ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ. ಬಂಟ್ವಾಳ ತಾಲೂಕಿನ ಹೆಚ್ಚಿನ ಕಡೆ ಉತ್ತಮ ಮಳೆ ಸುರಿದಿದೆ.
ಮೂರು ದಿನ ಯೆಲ್ಲೋ ಅಲರ್ಟ್..!!
ಮುಂದಿನ ಮೂರ್‍ನಾಲ್ಕು ದಿನ ಕರಾವಳಿಯಲ್ಲಿ ಮಳೆ ಇನ್ನಷ್ಟು ಚುರುಕಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಆಗಸ್ಟ್ 22, 24 ಮತ್ತು 25ಕ್ಕೆ ಅನ್ವಯ ವಾಗುವಂತೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಈ ಅವಧಿಯಲ್ಲಿ ಸಾಧಾರಣದಿಂದ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೊಡಗು ಮತ್ತು ಚಿಕ್ಕಮಗಳೂರಿಗೂ ಈ 3 ದಿನಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಕಾಸರಗೋಡು ಸಹಿತ ಕೇರಳದ ವಿವಿಧೆಡೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದೂ ತಿಳಿಸಲಾಗಿದೆ.
ಸಮುದ್ರದಲ್ಲಿ ಆ. 23ರಿಂದ 25ರ ವರೆಗೆ ಗಾಳಿಯ ವೇಗ ಹೆಚ್ಚಿರುವ ಸಾಧ್ಯತೆ ಇದೆ. ಗಂಟೆಗೆ 40ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಂಭವ ಇದೆ. ಆದುದರಿಂದ ಕೇರಳ ಮತ್ತು ಕರ್ನಾಟಕ ಕರಾವಳಿಯ ಮೀನುಗಾರರು ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ತಿಳಿಸಿದೆ.



























