ಉಳ್ಳಾಲ : ಇಲ್ಲಿನ ಕೊಂಡಾಣ ಶ್ರೀ ಬಂಟ ಪಿಲಿಚಾಮುಂಡಿ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಪತ್ತೆಯಾಗಿದ್ದು, ದೈವಸ್ಥಾನದ ಆಡಳಿತ ಸಮಿತಿ ಭಾನುವಾರ ಹುಂಡಿಯನ್ನು ಒಡೆಯುವ ಸಂದರ್ಭ ಈ ವಿಚಾರ ಬೆಳಕಿಗೆ ಬಂದಿದೆ.
ಕೆಲ ತಿಂಗಳ ಹಿಂದೆ ಉಳ್ಳಾಲ ಭಾಗದಲ್ಲಿರುವ ಕೊರಗಜ್ಜನ ಕಟ್ಟೆಯ ಕಾಣಿಕೆ ಹುಂಡಿಯಲ್ಲಿ ಇದೇ ರೀತಿಯ ಪ್ರಕರಣ ನಡೆದಿತ್ತು. ನಂತರ ದೈವದ ಕಾರಣಿಕದಿಂದಾಗಿ ಒಬ್ಬಾತ ರಕ್ತ ಕಾರಿಕೊಂಡು ಸಾವಿಗೀಡಾಗಿದ್ದ ಎಂದು ದೈವಸ್ಥಾನದ ಬಳಿ ಬಂದು ಇಬ್ಬರು ತಪ್ಪೊಪ್ಪಿಕೊಂಡಿದ್ದು, ನಂತರ ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದರು. ಅದೇ ಸಂದರ್ಭದಲ್ಲಿ ಕಾರಣಿಕ ಕ್ಷೇತ್ರ ಕೊಂಡಾಣ ದೈವಸ್ಥಾನದಲ್ಲಿಯೂ ಆರೋಪಿಗಳು ದುಷ್ಕೃತ್ಯ ಎಸಗಿರುವ ಸಾಧ್ಯತೆಗಳಿವೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಉಳ್ಳಾಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲಿಸರು ತನಿಖೆ ಕೈಗೆತ್ತಿಕೊಂಡಿದ್ದಾರೆ