ಉಪ್ಪಿನಂಗಡಿ: ಬೀಗ ಮುರಿದು ಕಾಲೇಜಿಗೆ ನುಗ್ಗಿದ ಕಳ್ಳರು ಕಳ್ಳತನಕ್ಕೆ ಪ್ರಯತ್ನ ನಡೆಸಿದ ಘಟನೆ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.
ಕಾಲೇಜಿನಲ್ಲಿ ಪ್ರಸಕ್ತ ವಾರ್ಷಿಕ ಪರೀಕ್ಷೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಕಾಲೇಜಿನ ಕೆಮಿಸ್ಟ್ರಿ ಲ್ಯಾಬ್ ಕೊಠಡಿಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಕೊಠಡಿಯಲ್ಲಿದ್ದ ಇನ್ನೊಂದು ಬಾಗಿಲು ಮುರಿಯಲು ಯತ್ನಿಸಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಬೀಗದ ಕೀಗಾಗಿ ನಾಲೈದು ಡ್ರಾಯರ್ ಗಳ ಬೀಗ ಮುರಿದಿದ್ದಾರೆ.
ಕಳ್ಳರು ಕಚೇರಿಯೊಳಗೆ ಜಾಲಾಡಿದ ಬಗ್ಗೆ ನೋಡಿದಾಗ ಪರೀಕ್ಷಾ ಪ್ರಶ್ನೆಪತ್ರಿಕೆಯನ್ನು ಬಯಸಿ ಈ ಕಳವು ಯತ್ನ ನಡೆದಿರಬಹುದೇ ಎಂಬ ಶಂಕೆ ಮೂಡಿದೆ.
ಪ್ರಶ್ನಾಪತ್ರಿಕೆಗಳನ್ನು ರಕ್ಷಿಸಿ ಇಡಲಾದ ಕವಾಟಿನ ಬೀಗವು ಪ್ರಾಂಶುಪಾಲರ ಬಳಿಯಲ್ಲಿಯೇ ಇದ್ದ ಹಿನ್ನೆಲೆಯಲ್ಲಿ ಹಾಗೂ ಕವಾಟು ಒಂದಷ್ಟು ಭದ್ರತಾ ವ್ಯವಸ್ಥೆಯನ್ನು ಹೊಂದಿದ್ದ ಹಿನ್ನೆಲೆಯಲ್ಲಿ ಪ್ರಶ್ನಾಪತ್ರಿಕೆಯ ಕಳವು ಸಾಧ್ಯವಾಗಿಲ್ಲ. ಇದೇ ವೇಳೆ ಕಾಲೇಜಿನಲ್ಲಿದ್ದ ಕೆಲವು ದೀಪಕಂಬಗಳ ಸಹಿತ ವಸ್ತುಗಳನ್ನು ಕದ್ದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸ್ ಇಲಾಖೆಯ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿದ್ದು, ಕಾಲೇಜಿನ ಪ್ರಾಂಶುಪಾಲ ಶೇಖರ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖಾ ಕೈಗೆತ್ತಿಕೊಂಡಿದ್ದಾರೆ.