ವಿಟ್ಲ: ಕುಡಿತದ ಮತ್ತಿನಲ್ಲಿ ತಮ್ಮನೋರ್ವ ಅಣ್ಣನನ್ನು ಹೊಡೆದು ಕೊಲೆ ನಡೆಸಿದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಂಗೆ ಎಂಬಲ್ಲಿ ನಡೆದಿದ್ದು, ಘಟನಾ ಸ್ಥಳಕ್ಕೆ ಎಎಸ್ಪಿ ಕುಮಾರಚಂದ್ರ ರವರು ಭೇಟಿ ನೀಡಿದ್ದಾರೆ.

ವಿಟ್ಲ ಪಡ್ನೂರು ಗ್ರಾಮದ ಕೊಡಂಗೆ ದಿ. ಸೀನಪ್ಪ ದೇವಾಡಿಗ ರವರ ಪುತ್ರ ಗಣೇಶ್ ಬಂಗೇರ(54) ಮೃತ ದುರ್ದೈವಿ.
ನಿನ್ನೆ ತಡರಾತ್ರಿ ಕುಡಿತದ ಮತ್ತಿನಲ್ಲಿ ತಮ್ಮ ಪದ್ಮನಾಭ ಬಂಗೇರ ಗಣೇಶ ಬಂಗೇರ ರವರನ್ನು ಯಾವುದೋ ಆಯುಧ ಬಳಸಿ ಕೊಲೆಗೈದಿರುವುದಾಗಿ ಮೃತರ ಸಹೋದರಿ ಆರೋಪಿಸಿದ್ದಾರೆ.
ಬೆಳಗ್ಗೆ ತಾಯಿ ಪೋನ್ ಮಾಡಿ ಗಣೇಶ ಬಂಗೇರ ರವರು ಮಲಗಿದಲ್ಲೇ ಇದ್ದಾರೆ ಮಾತನಾಡುವುದಿಲ್ಲ ಎಂದು ತಿಳಿಸಿದ್ದು, ಬಳಿಕ ನಾನು ಹಾಗೂ ಅಕ್ಕನ ಮಗ ತಾಯಿ ಮನೆಗೆ ಬಂದು
ನೋಡಿದಾಗ ಅವರು ಮೃತಪಟ್ಟ ಸ್ಥಿತಿಯಲ್ಲಿದ್ದರು ಎಂದು ಮೃತರ ಸಹೋದರಿ ತಿಳಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್ ರವರ ನೇತೃತ್ವದ ಪೊಲೀಸರ ತಂಡ ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದೆ. ಮೃತದೇಹವನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಎಎಸ್ಪಿ ಕುಮಾರ ಚಂದ್ರ ರವರು ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.