ಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನವೆಂಬರ್ ತಿಂಗಳಲ್ಲಿ ನಡೆಯಲಿರುವ ವರ್ಷಾವಧಿ ಜಾತ್ರೋತ್ಸವ ಷಷ್ಠಿ ಮಹೋತ್ಸವದ ಅಂಗವಾಗಿ ಪೂರ್ವಭಾವಿ ಸಭೆಯು ಸೆ.25 ರಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಬಳ್ಳಕ್ಕುರಾಯ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಷಷ್ಠಿ ಮಹೋತ್ಸವವನ್ನು ಪೂರ್ವ ಶಿಷ್ಠ ಸಂಪ್ರದಾಯದಂತೆ ನಡೆಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಷಷ್ಠಿ ಮಹೋತ್ಸವದಲ್ಲಿ ವಿಶೇಷವಾಗಿರುವ ಅನ್ನದಾನ, ಉತ್ಸವಗಳು, ದೈವಗಳ ನೇಮೋತ್ಸವ ಮೊದಲಾದ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು. ಷಷ್ಠಿ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು, ಭಕ್ತಾದಿಗಳು ಹಾಗೂ ಗ್ರಾಮಸ್ಥರು ಸಹಕರಿಸುವಂತೆ ಅಧ್ಯಕ್ಷ ಸುಬ್ರಹ್ಮಣ್ಯ ಬಳ್ಳಕ್ಕುರಾಯ ವಿನಂತಿಸಿದರು.
ಜಾತ್ರೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಬೇಡಿಕೆ ಬಂದಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಪಂಚಮಿಯ ದಿನ ಬೆಳಿಗ್ಗೆ ಶ್ರೀರಾಗ್ ಮ್ಯೂಸಿಕಲ್ ನವರಿಂದ ಭಕ್ತಿರಸಮಂಜರಿ, ಸಂಜೆ ಮಹಿಳಾ ಯಕ್ಷಗಾನ ಸಂಘದವರಿಂದ ಯಕ್ಷಗಾನ ಬಯಲಾಟ ನಡೆಸುವುದಾಗಿ ತೀರ್ಮಾನಿಸಲಾಯಿತು.

ಮುಂಬರುವ ಗ್ರಹಣದ ಅಂಗವಾಗಿ ಗ್ರಹಣ ಶಾಂತಿ ಮತ್ತು ಆಯುಧ ಪೂಜೆಯನ್ನು ನಡೆಸುವ ಕುರಿತು ಭಕ್ತಾದಿಗಳಿಂದ ಬೇಡಿಕೆ ಬಂದಿದ್ದು ಅ.25 ಹಾಗೂ ನ.8 ರಂದು ನಡೆಯಲಿರುವ ಗ್ರಹಣಕ್ಕೆ ಸಂಬಂಧಿಸಿದಂತೆ ಅದೇ ದಿನ ದೇವಸ್ಥಾನದಲ್ಲಿ ಸಂಜೆ ಗ್ರಹಣ ಶಾಂತಿ ನಡೆಸುವುದು ಹಾಗೂ ಅ.1ರಂದು ಬೆಳಿಗ್ಗೆ11.30ಕ್ಕೆ ಆಯುಧ ಪೂಜೆ ನಡೆಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿಶ್ವನಾಥ ನಾಯ್ಕ, ದಯಾನಂದ, ಆನಂದ ಪೂಜಾರಿ, ಪ್ರೇಮಲತಾ ರಾವ್, ವಿನುತಾ ಮೋಹನ್, ಅರ್ಚಕ ವೆಂಕಟೇಶ ಭಟ್, ವ್ಯವಸ್ಥಾಪಕ ಪ್ರಶಾಂತ್ ಹಾಗೂ ಭಕ್ತಾದಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.