ಮುಂಬೈಗೆ ಆಗಮಿಸಿದ್ದ ದಕ್ಷಿಣ ಕೊರಿಯಾದ ಮಹಿಳಾ ಯೂಟ್ಯೂಬರ್ ಒಬ್ಬರಿಗೆ ಇಬ್ಬರು ಯುವಕರು ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮೊಬೀನ್ ಚಾಂದ್ ಮೊಹಮ್ಮದ್ ಶೇಖ್ ಮತ್ತು ಮೊಹಮ್ಮದ್ ನಕೀಬ್ ಸದ್ರೇಲಂ ಅನ್ಸಾರಿ ಎಂದು ಗುರುತಿಸಲಾಗಿದೆ.
ಮುಂಬೈನ ಖಾರ್ ನಲ್ಲಿ ಕೊರಿಯಾದ ಮಹಿಳಾ ಯೂಟ್ಯೂಬರ್ ನೇರ ಪ್ರಸಾರ ಮಾಡುವಾಗ ಆಕೆಯ ಬಳಿ ಬೈಕ್ ನಲ್ಲಿ ಬಂದ ಇಬ್ಬರು ಯುವಕರು ಆಕೆಯನ್ನು ಬಲವಂತವಾಗಿ ಬೈಕ್ ನಲ್ಲಿ ಕೂರಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಓರ್ವ ಯುವಕ ಆಕೆಗೆ ಮುತ್ತು ಕೊಡುವಂತೆ ಬಲವಂತ ಮಾಡಿದ್ದು, ಇದರಿಂದ ವಿಚಲಿತಳಾದ ಆಕೆ ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೂ ಬಿಡದ ಆತ ಆಕೆಯನ್ನು ಬೈಕ್ ಮೇಲೆ ಕೂರುವಂತೆ ಒತ್ತಾಯಿಸಿದ್ದಾನೆ. ಈ ವೇಳೆ ಆಕೆ ಆತನಿಂದ ತಪ್ಪಿಸಿಕೊಂಡು ಮುಂದಕ್ಕೆ ಹೋಗಿದ್ದು, ಆಕೆಯನ್ನು ಮತ್ತೆ ಹಿಂಬಾಲಿಸಿದ ಇಬ್ಬರು ಡ್ರಾಪ್ ಮಾಡುತ್ತೇನೆ ಬಾ ಎಂದು ಕೂಗುತ್ತಾರೆ.
ಆದರೆ, ಆ ಮಹಿಳೆ ಅದನ್ನು ನಿರಾಕರಿಸಿದ್ದು, ನನ್ನ ಮನೆ ಸಮೀಪದಲ್ಲಿಯೇ ಇದೆ., ನಾನು ಹೋಗುತ್ತೇನೆ ಎನ್ನುತ್ತಾಳೆ. ಬಳಿಕ ಅವರು ಮುಂದಿನ ಸಾರಿ ಭೇಟಿಯಾಗೋಣ ಎಂದು ಹೇಳಿದ್ದಾರೆ. ಅದಕ್ಕೆ ಆಕೆ ಮತ್ತೆ ಭೇಟಿಯಾಗೋಣ ಎಂದು ಹೇಳಿ ಮುಂದಕ್ಕೆ ಹೋಗುತ್ತಾಳೆ.
ವೀಡಿಯೊವನ್ನು ಮತ್ತೊಮ್ಮೆ ಟ್ವೀಟ್ ಮಾಡಿರುವ ಆ ಮಹಿಳೆ, ಆರೋಪಿಯೊಂದಿಗೆ ಮತ್ತೊಬ್ಬ ವ್ಯಕ್ತಿಯೂ ಇದ್ದುದರಿಂದ ಪರಿಸ್ಥಿತಿ ಉಲ್ಬಣಗೊಳ್ಳದಂತೆ ನಾನು ಪ್ರಯತ್ನಿಸಿದೆ ಎಂದು ಬರೆದುಕೊಂಡಿದ್ದಾಳೆ. ಈ ಘಟನೆ ಬಳಿಕ ಮಹಿಳಾ ಯೂಟ್ಯೂಬರ್ ವಿಚಲಿತಳಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ. ಈ ಘಟನೆಯನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.