ವಿಟ್ಲ : ತಂತ್ರಜ್ಞಾನ ಅಭಿವೃದ್ಧಿಯಾಗುತ್ತಾ ಹೋದಂತೆ ಅದನ್ನು ಬಳಸಿಕೊಂಡು ಬೇರೆಯವರಿಗೆ ಮೋಸ ಮಾಡುವವರೂ ಹೆಚ್ಚುತ್ತಿದ್ದಾರೆ. ಇದೀಗ ಬಹು ಪ್ರಖ್ಯಾತ ಸಾಮಾಜಿಕ ಸಂಪರ್ಕ ಮೆಸೆಂಜರ್ ವಾಟ್ಸಪ್‌ಗಳ ಮೂಲಕ ಪ್ರತಿಷ್ಠಿತ ವ್ಯಕ್ತಿಗಳ ಡಿಪಿ ಹಾಗೂ ಹೆಸರು ಹಾಕಿಕೊಂಡು, ಅವರ ಸ್ನೇಹಿತರಿಗೆ ವಾಟ್ಸಪ್ ಮೆಸೇಜ್ ಮಾಡಿ ಹಣ ಪೀಕುವ ದಂಧೆ ಪ್ರಾರಂಭವಾಗಿದೆ. ಹೀಗಾಗಿ ವಾಟ್ಸಪ್ ಬಳಕೆದಾರರು ಎಚ್ಚರಿಕೆಯಿಂದ ವ್ಯವಹರಿಸಬೇಕಾಗಿದೆ.
ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಒಂದೇ ವಾರದಲ್ಲಿ ಬೇರೆ ಬೇರೆ ಪ್ರಕರಣಗಳಲ್ಲಿ ಒಟ್ಟು ಮೂರು ಲಕ್ಷ ರೂ. ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.
ಅದರಲ್ಲೂ ವಿಟ್ಲದ ಪ್ರತಿಷ್ಠಿತ ಗಣ್ಯ ವ್ಯಕ್ತಿಯೊಬ್ಬರು ಇಂತಹ ಜಾಲಕ್ಕೆ ಸಿಕ್ಕಿಹಾಕಿಕೊಂಡು ಒಂದೂವರೆ ಲಕ್ಷ ರೂ. ಕಳೆದುಕೊಂಡಿದ್ದಾರೆ. ಕೆಲವರು ಹುಡುಗಿ ಹೆಸರಿನಲ್ಲಿ ನಕಲಿ ಖಾತೆ ತೆರೆದು ಆ ಮೂಲಕ ಬ್ಲ್ಯಾಕ್ ಮೇಲ್ ಮಾಡುತ್ತಾರೆ. ಇದರಿಂದ ಮಾನಕ್ಕೆ ಹೆದರಿ ಜನರು ಮೋಸ ಹೋಗಿದ್ದಾರೆ.
ಇನ್ನೂ ಯೂಟ್ಯೂಬ್, ಟೆಲಿಗ್ರಾಮ್ , ಕೊರಿಯರ್ ಹೆಸರಿನಲ್ಲಿ ಭಾರೀ ವಂಚನೆಯ ಜಾಲ ಸಕ್ರಿಯವಾಗಿದೆ. ಮೋಸ ಹೋದ ಒಂದು ಗಂಟೆಯೊಳಗಡೆ 1930 ಸಂಖ್ಯೆಗೆ ಕರೆ ಮಾಡಿದರೆ ಕಳೆದುಕೊಂಡ ಹಣ ಅನ್ಯರ ಪಾಲಾಗದಂತೆ ತಡೆಯುವ ಅವಕಾಶವಿದೆ.
ವಿಟ್ಲ ಎಸ್.ಐ ಕಾರ್ತಿಕ್ ಅವರು ಆನ್ ಲೈನ್ ಮೂಲಕ ವಂಚನೆ ನಡೆಯುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದು, ಕೊರಿಯರ್, ಬ್ಯಾಂಕ್ ಚಟುವಟಿಕೆ, ಯೂಟ್ಯೂಬ್ ಹೆಸರಿನಲ್ಲಿ ಅನ್ಯ ವ್ಯಕ್ತಿಗಳು ಕರೆ ಮಾಡಿದರೆ ಯಾರೂ ಓಡಿಪಿ ನೀಡಲು ಹೋಗಬಾರದು ಎಂದು ಸಾರ್ವಜನಿಕರಲ್ಲಿ ವಿನಂತಿಸುತ್ತಿದ್ದಾರೆ.
ಫೇಸ್ಬುಕ್ ನಲ್ಲಿ ನಕಲಿ ಖಾತೆ ಸೃಷ್ಟಿಸಿ ಫ್ರೆಂಡ್ ರಿಕ್ವೆಸ್ಟ್ ಕಳಿಸುವುದರ ಮೂಲಕ ಅವರ ಸುತ್ತಮುತ್ತಲ ಜನರಲ್ಲಿ ಸಹಾಯಕ್ಕೆ ಅಂಗಲಾಚಿದಂತೆ ನಾಟಕ ಮಾಡುವ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದೆ.
ಇನ್ಸ್ಟಾಗ್ರಾಂ, ಮೇಲ್, ಟೆಕ್ಸ್ಟ್ ಮೆಸೇಜ್ ಮೂಲಕವೂ ಹಣ ಕೇಳುವ ಪ್ರಕರಣಗಳು ನಡೆದಿತ್ತು. ಆದರೆ ಈಗ ವಾಟ್ಸಪ್ ಮೂಲಕ ಇಂತಹ ಪ್ರಕರಣ ನಡೆದಿರುವುದು ಜನರಲ್ಲಿ ಗೊಂದಲ ಹೆಚ್ಚಿಸಿದೆ.
ಯಾವುದೇ ಕಾರಣಕ್ಕೂ ಒಟಿಪಿ ಶೇರ್ ಮಾಡಬಾರದು ಮತ್ತು ಯಾವುದೇ ಭಯವಿಲ್ಲದೆ ಕೂಡಲೇ ಠಾಣೆಗೆ ಭೇಟಿ ನೀಡುವಂತೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.