ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾದ ಅರ್ಜುನ್ ಮತ್ತು ಲಾರಿ ನದಿಯ ಆಳದಲ್ಲಿ ಸಿಲುಕಿದೆ. 20 ಅಡಿ ಅಳದಲ್ಲಿ ಲಾರಿ ಇದೆ ಎಂಬ ಮಾಹಿತಿ ದೊರೆತಿದೆ. ಹೀಗಾಗಿ ಕರಾವಳಿಯ ಮುಗುಳು ತಜ್ಞ ಈಶ್ವರ್ ಮಲ್ಪೆ ಮತ್ತು ಅವರ ತಂಡ ಇಂದು ಶಿರೂರಿಗೆ ಆಗಮಿಸುತ್ತಿದೆ.
ಶಿರೂರು ಗುಡ್ಡ ಕುಸಿತ ಪ್ರಕರಣ ಸಂಭವಿಸಿ ಇಂದಿಗೆ 12 ದಿನ. ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ದುರಂತದಲ್ಲಿ ಸಿಲುಕಿ ನಾಪತ್ತೆಯಾಗಿದ್ದಾರೆ. ಸದ್ಯ ಎಲ್ಲಾ ರೀತಿಯಲ್ಲೂ ಹುಡುಕಾಟ ನಡೆದಿದೆ. ಮುಳುಗು ತಜ್ಞರಿಂದ ನೀರಿನಲ್ಲಿರುವ ಲಾರಿ ಮತ್ತು ಚಾಲಕ ಅರ್ಜುನ್ನನ್ನು ಪತ್ತೆ ಹಚ್ಚಬೇಕಿದೆ. ಅದಕ್ಕಾಗಿ ಕರಾವಳಿಯ ನುರಿತ ಮುಳುಗು ತಜ್ಞ ಈಶ್ವರ್ ಮಲ್ಪೆಯವರ ಅನಿವಾರ್ಯತೆ ಕಾಡಿದೆ. ಜಿಲ್ಲಾಡಳಿತದ ಮನವಿ ಮೇರೆಗೆ ಈಶ್ವರ್ ಮಲ್ಪೆ ಸ್ಥಳಕ್ಕಾಗಮಿಸುತ್ತಿದ್ದಾರೆ.
ಈಶ್ವರ್ ಮಲ್ಪೆ ಮೂಲತಃ ಕರಾವಳಿ ಭಾಗದವರು. ಆ್ಯಂಬುಲೆನ್ಸ್ ಚಾಲಕನಾಗಿರುವ ಈಶ್ವರ್ ಅದೇಷ್ಟೋ ಜನರ ಜೀವ ಉಳಿಸಿದ್ದಾರೆ. ಮಾತ್ರವಲ್ಲದೆ ನದಿ ಆಳದಲ್ಲಿ ಸಿಲುಕಿದ, ನಾಪತ್ತೆಯಾದ ಮೃತದೇಹವನ್ನು ಪತ್ತೆ ಹಚ್ಚುವ ಸಾಹಸಿ. ಯಾರಿಂದಲೂ ಸಾಧ್ಯವಾಗದ ಕೆಲಸವನ್ನು ಈಶ್ವರ್ ಮಲ್ಪೆ ಮಾಡುತ್ತಾರೆ. ಎಂತಹದೇ ಅಪಾಯಕಾರಿಯಾದರು ಆ ಸ್ಥಳದಲ್ಲಿ ಶೋಧ ನಡೆಸಿ, ಅದೆಷ್ಟೋ ಮೃತದೇಹವನ್ನು ಮೇಲೆತ್ತಿಕೊಟ್ಟಿದ್ದಾರೆ.
ಅದೇಷ್ಟೋ ಬಾರಿ ಈಶ್ವರ್ ಮಲ್ಪೆಗೆ ಊಟದ ಸಮಯದಲ್ಲೂ ಕರೆ ಬಂದಿದ್ದಿದೆ. ಸನ್ಮಾನ ಕಾರ್ಯಕ್ರಮದಲ್ಲಿದ್ದಾಗಲೂ ಕರೆ ಬಂದಿದೆ. ಈ ವೇಳೆ ಅವರು ತಡ ಮಾಡದೆ ತುರ್ತು ಕರೆಗೆ ಓಗೊಟ್ಟು ರಕ್ಷಿಸಿದ ನೂರಾರು ಘಟನೆಗಳಿವೆ.