ಕಳ್ಳರಲ್ಲೂ ವಿಚಿತ್ರ ವಿಚಿತ್ರ ಕಳ್ಳರು ಇರುತ್ತಾರೆ. ಹಗಲು ಕದಿಯುವವರು ಬೇರೆ, ರಾತ್ರಿ ಕದಿಯುವವರೇ ಬೇರೆ. ದೇವಾಲಯಗಳಿಗೆ ನುಗ್ಗಿ ಹುಂಡಿಗಳನ್ನು ಲೂಟಿ ಮಾಡಿ ಅದರಲ್ಲಿನ ಹಣ ಕದ್ದು ಓಡಿ ಹೋದ ಖದೀಮರು ಇದ್ದಾರೆ. ಸಿಸಿಟಿವಿ ಇದ್ದರೂ ಹೆದರದೇ ಕಳ್ಳತನ ಮಾಡಿದ್ದು ಉಂಟು. ಇಲ್ಲೊಬ್ಬ ಕಳ್ಳ ಮನೆಗೆ ನುಗ್ಗಿ ಕದಿಯಲೆಂದು ಹುಡುಕಾಡಿ.. ಹುಡುಕಾಡಿ ಸುಸ್ತಾಗಿ ಕೊನೆಗೆ ತಾನೇ 20 ರೂಪಾಯಿ ಇಟ್ಟು ಹೋಗಿದ್ದಾನೆ.
ಭಾರೀ ಆಸೆಗಳನ್ನು ಇಟ್ಟುಕೊಂಡ ಕಳ್ಳನೊಬ್ಬ ಫುಲ್ ಮಾಸ್ಕ್ ಧರಿಸಿ, ರಾಡ್ ಹಿಡಿದು ರಾತ್ರಿ ಯಾರು ಇಲ್ಲದ ಮನೆಯ ಬೀಗ ಹೊಡೆದು ಕದಿಯಲೆಂದು ನುಗ್ಗಿದ್ದಾನೆ.
ಮನೆ ಒಳಗೆ ಹೋದವನೇ ಚಿನ್ನಾಭರಣ, ಬೆಳ್ಳಿ ಹಾಗೂ ದುಡ್ಡು ಇರಬಹುದೆಂದು ಆ ಮನೆಯನ್ನೆಲ್ಲ ತಡಕಾಡಿದ್ದಾನೆ. ಆ ಮನೆಯಲ್ಲಿ ವಸ್ತುಗಳು ಬಿಟ್ಟರೇ ಬೇರೆ ಏನು ಇಲ್ಲ. ದುಡ್ಡಂತೂ ಒಂದು ಬಿಡಿಗಾಸೂ ಕೂಡ ಸಿಕ್ಕಿಲ್ಲ. ಇದರಿಂದ ಕಳ್ಳ ಭಾರೀ ನಿರಾಸೆಗೆ ಒಳಗಾಗಿ ಮನೆಯ ಸಿಸಿಟಿವಿ ಮುಂದೆ ಬಂದು ಕೈ ತೋರಿಸುತ್ತ ಏನೋ ಹೇಳಿದ್ದಾನೆ.
ಬಳಿಕ ಮನೆಯಲ್ಲಿದ್ದ ಫ್ರಿಡ್ಜ್ ಒಳಗಿಂದ ಒಂದು ನೀರಿನ ಬಾಟಲ್ ತೆಗೆದುಕೊಂಡಿದ್ದಾನೆ. ಅದನ್ನು ಸಿಸಿಟಿವಿ ಕ್ಯಾಮರಾ ಮುಂದೆ ತೋರಿಸುತ್ತ ಈ ಬಾಟಲ್ ತಗೊಂಡಿದ್ದಕ್ಕೆ 20 ರೂಪಾಯಿಗಳನ್ನು ಇಟ್ಟು ಹೋಗುತ್ತಿದ್ದೇನೆ ಎಂದು ಸನ್ನೆಗಳನ್ನು ಮಾಡಿದ್ದಾನೆ. ಪರ್ಸ್ನಿಂದ 20 ರೂಪಾಯಿಗಳನ್ನು ತೆಗೆದು ಟೇಬಲ್ ಮೇಲೆ ಇಟ್ಟು ಹೋಗಿದ್ದಾನೆ.
ಸ್ವಾರಸ್ಯಕರವಾದ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಮಹೇಶ್ವರಂ ಗ್ರಾಮದ ಮನೆಯೊಂದರಲ್ಲಿ ನಡೆದಿದೆ.