ಪುತ್ತೂರು: ಸತತ ಲಾಕ್ ಡೌನ್ ನಿಂದಾಗಿ ಜರ್ಜರಿತವಾಗಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಹಾಗೂ ಲಾಕ್ಡೌನ್ ಮುಂದುವರಿದಿರುವ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್ ಅನ್ನು ಬಿಡುಗಡೆ ಮಾಡಬೇಕೆಂದು ಕೆಪಿಸಿಸಿ ಅಲ್ಪಸಂಖ್ಯಾತ ಸಮಿತಿ ಸರಕಾರವನ್ನು ಒತ್ತಾಯಿಸಿದೆ.
ಸಾಂಕ್ರಾಮಿಕ ರೋಗ ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಸತತ ಲಾಕ್ಡೌನ್ ಮಾಡಿದರೂ ದಕ್ಷಿಣ ಕನ್ನಡ ಜಿಲ್ಲೆಯ ಜನತೆಯು ಬಹಳ ಸಂಯಮದಿಂದ ಸರಕಾರಕ್ಕೆ ಸಹಕಾರವನ್ನು ನೀಡಿದ್ದಾರೆ. ಈ ಭಾಗದಲ್ಲಿ ಹೆಚ್ಚಿನ ಜನರು ದಿನಗೂಲಿ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದು, ದುಡಿಮೆ ಇಲ್ಲದೆ ಮನೆಯೊಳಗೆ ಕಳೆಯುವಂತಾಗಿದೆ. ಇದರಿಂದ ಇವರ ಜೀವನ ನಿರ್ವಹಣೆ ಬಹಳಷ್ಟು ಕಷ್ಟದಿಂದ ಸಾಗುತ್ತಿದೆ.ಇಲ್ಲಿನ ಮೀನುಗಾರರು, ಕೃಷಿಕರು, ಬೀಡಿ ಕಾರ್ಮಿಕರು, ರಿಕ್ಷಾ ಚಾಲಕರು, ದಿನಗೂಲಿ ನೌಕರರು ಹಾಗೂ ಇತರ ಎಲ್ಲಾ ವರ್ಗದ ಜನರು ಯಾವುದೇ ವ್ಯವಹಾರ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗಾಲದ ಆರಂಭದಿಂದ ಸಾಕಷ್ಟು ಕಷ್ಟನಷ್ಟಗಳು ಇಲ್ಲಿಗೆ ಎದುರಾಗಿದೆ. ಈ ನಿಟ್ಟಿನಲ್ಲಿ ಸರಕಾರ ಕೂಡಲೇ ಗಮನ ಹರಿಸಿ, ದಕ್ಷಿಣ ಕನ್ನಡ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಅನ್ನು ಬಿಡುಗಡೆಗೊಳಿಸಿ, ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಿತಿಯ ಉಪಾಧ್ಯಕ್ಷರಾದ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಸರಕಾರವನ್ನು ಆಗ್ರಹಿಸಿದ್ದಾರೆ.