ಮಂಗಳೂರು, ಜೂನ್ 25: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿಲ್ಪಾಡಿ ಗ್ರಾಮದ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಗಾಂಜಾ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಮುಲ್ಕಿ ಪೊಲೀಸರು ಬಂಧಿಸಿ, ಆತನಿಂದ ಸುಮಾರು ₹2 ಲಕ್ಷ ಮೌಲ್ಯದ 4 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಉಳ್ಳಾಲ ತಾಲೂಕಿನ ಕೋಟೆಕಾರ್ ಗ್ರಾಮದ ಹಿದಾಯತ್ ನಗರ ಮುಳ್ಳುಗುಡ್ಡೆಯ ಹಿದಾಯತ ಮಸೀದಿ ಸಮೀಪದ ನಿವಾಸಿ ಅಬ್ಬಾಸ್ (50) ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಜೂನ್ 25ರಂದು ಕಿಲ್ಪಾಡಿ ಗ್ರಾಮದ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ವೇಳೆ ಆರೋಪಿಯನ್ನು ವಶಕ್ಕೆ ಪಡೆದು, ಆತನ ಬಳಿಯಿದ್ದ 4 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 45/2026ರಡಿ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(ಸಿ) ಹಾಗೂ 20(ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪಣಂಬೂರು ಎಸಿಪಿ ತಂಡ ಹಾಗೂ ಮುಲ್ಕಿ ಪೊಲೀಸ್ ಠಾಣೆಯ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ವಿರುದ್ಧ ಈ ಹಿಂದೆಯೂ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, 2021ರಲ್ಲಿ ಕೊಲೆ ಯತ್ನ ಸೇರಿದಂತೆ ವಿವಿಧ ಐಪಿಸಿ ಕಲಂಗಳಡಿ ಹಾಗೂ 2026ರಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಮತ್ತೊಂದು ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ.
ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.


























