ಪುತ್ತೂರು, ಜೂನ್ 26: ಅಕ್ರಮವಾಗಿ ಜಾನುವಾರನ್ನು ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಪುತ್ತೂರು ಗ್ರಾಮಾಂತರ ಪೊಲೀಸರು ಇಬ್ಬರನ್ನು ಬಂಧಿಸಿ, ಒಂದು ಜಾನುವಾರು ಹಾಗೂ ಪಿಕ್‌ಅಪ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಜೂನ್ 25ರಂದು ಸಂಜೆ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಸುಷ್ಮಾ ಜಿ. ಭಂಡಾರಿ ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ, ಸಿಬ್ಬಂದಿಗಳೊಂದಿಗೆ ಆರ್ಯಾಪು ಗ್ರಾಮದ ಮರಕ್ಕ ಪ್ರದೇಶದಲ್ಲಿ ದಾಳಿ ನಡೆಸಲಾಯಿತು. ಈ ವೇಳೆ KA-21-5450 ಸಂಖ್ಯೆಯ ಪಿಕ್‌ಅಪ್ ವಾಹನವನ್ನು ತಡೆದು ಪರಿಶೀಲಿಸಿದಾಗ, ಒಂದು ಜಾನುವಾರನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿರುವುದು ಪತ್ತೆಯಾಯಿತು.
ವಾಹನದ ಚಾಲಕ ನಾರಾಯಣ ಹಾಗೂ ಸಹಪ್ರಯಾಣಿಕ ಮೊಯ್ದುಕುಂಞ ಅವರನ್ನು ವಿಚಾರಿಸಿದಾಗ, ಜಾನುವಾರು ಸಾಗಾಟಕ್ಕೆ ಅಗತ್ಯವಿರುವ ಪೂರ್ವಾನುಮತಿ ಹಾಗೂ ದಾಖಲೆಗಳು ಇಲ್ಲದಿರುವುದು ದೃಢಪಟ್ಟಿದೆ.
ಪೊಲೀಸರು ಜಾನುವಾರು ಮತ್ತು ವಾಹನವನ್ನು ವಶಪಡಿಸಿಕೊಂಡು, ಆರೋಪಿಗಳ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 95/2026ರಡಿ, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020ರ ಕಲಂ 5, 7, 12 ಹಾಗೂ ಪ್ರಾಣಿ ಹಿಂಸೆ ನಿಷೇಧ ಕಾಯ್ದೆಯ ಕಲಂ 11(ಡಿ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.



























