ನಗರದ ಸಮೀಪದ ದೇವಸ್ಯಪಡೂರು ಗ್ರಾಮದ ಅಲ್ಲಿಪಾದೆ ಬಳಿಯ ಅತ್ತಳಿಕೆ ಪ್ರದೇಶದಲ್ಲಿ ಕೆಂಪುಕಲ್ಲು ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾದ ಪರಿಣಾಮ ಕಾರ್ಮಿಕನೊಬ್ಬ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಕಾವಳಪಡೂರು ನಿವಾಸಿ ಪ್ರಮೋದ್ (42) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಲಾರಿ ಚಾಲಕ ಸುನಿಲ್ ಹಾಗೂ ಕಾರ್ಮಿಕ ಕೃಷ್ಣಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಲ್ಲಿನ ಕೋರೆಯಿಂದ ಕೆಂಪುಕಲ್ಲು ತುಂಬಿಸಿಕೊಂಡು ಬರುತ್ತಿದ್ದ ವೇಳೆ ಲಾರಿ ಏಕಾಏಕಿ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಸ್ಥಳೀಯರ ಪ್ರಕಾರ ಬ್ರೇಕ್ ವೈಫಲ್ಯದಿಂದ ಅಪಘಾತ ಸಂಭವಿಸಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ನಿಖರ ಕಾರಣ ಪೊಲೀಸ್ ತನಿಖೆಯ ನಂತರವೇ ತಿಳಿಯಲಿದೆ.
ಅಪಘಾತದ ತೀವ್ರತೆಗೆ ಲಾರಿ ಸಂಪೂರ್ಣ ಮಗುಚಿಬಿದ್ದಿದ್ದು, ಅದರಡಿ ಸಿಲುಕಿದ್ದ ಪ್ರಮೋದ್ ಹಾಗೂ ಕೃಷ್ಣಪ್ಪ ಅವರನ್ನು ಜೆಸಿಬಿ ಸಹಾಯದಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಮೋದ್ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


























