ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕುವೆಟ್ಟು ಶಕ್ತಿನಗರದಲ್ಲಿ ಕಳವು ಕೃತ್ಯಕ್ಕೆ ತೆರಳಿದ್ದ ವೇಳೆ ಕಬ್ಬಿಣದ ತಂತಿ ಕುತ್ತಿಗೆಗೆ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿ, ಕಳವು ಮಾಡಿದ್ದ 550 ಕೆಜಿ ಅಲ್ಯೂಮಿನಿಯಂ ವೈರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಕಾಶಿಪಟ್ನ ನಿವಾಸಿ ಪಿ. ಇಬ್ರಾಹಿಂ ಲತೀಫ್ (36) ಎಂದು ಗುರುತಿಸಲಾಗಿದೆ.
ಪ್ರಕರಣದ ವಿವರದಂತೆ, ಜೂನ್ 30ರಂದು ರಾತ್ರಿ ಮುಶ್ತಕ್, ಇಬ್ರಾಹಿಂ ಲತೀಫ್ ಹಾಗೂ ಮತ್ತೋರ್ವ ಆರೋಪಿ ಸೇರಿ ಕುವೆಟ್ಟು ಶಕ್ತಿನಗರದಲ್ಲಿರುವ ಸಂಸ್ಥೆಯೊಂದರ ಆವರಣದಿಂದ ಅಲ್ಯೂಮಿನಿಯಂ ಹಾಗೂ ಕಬ್ಬಿಣದ ಸಾಮಗ್ರಿಗಳನ್ನು ಕಳವು ಮಾಡಿದ್ದರು. ಈ ವೇಳೆ ಆಕಸ್ಮಿಕವಾಗಿ ಮುಶ್ತಕ್‌ನ ಕುತ್ತಿಗೆಗೆ ಕಬ್ಬಿಣದ ತಂತಿ ಸಿಲುಕಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಆರೋಪಿಯ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಆರಂಭದಲ್ಲಿ ಈ ಘಟನೆಗೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 35/2026 ದಾಖಲಾಗಿತ್ತು. ನಂತರ ತನಿಖೆಯಲ್ಲಿ ಕಳವು ನಡೆದಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅಪರಾಧ ಸಂಖ್ಯೆ 73/2026ರಡಿ ಬಿಎನ್‌ಎಸ್-2023ರ ಕಲಂ 331(4), 305 ಹಾಗೂ 3(5) ಅಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಯಿತು.
ತನಿಖೆಯ ಭಾಗವಾಗಿ ಜುಲೈ 14ರಂದು ಇಬ್ರಾಹಿಂ ಲತೀಫ್‌ನನ್ನು ಬಂಧಿಸಿದ ಪೊಲೀಸರು, ಕಳವು ಮಾಡಿದ್ದ ಸುಮಾರು 550 ಕೆಜಿ ಅಲ್ಯೂಮಿನಿಯಂ ವೈರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿಯ ವಿರುದ್ಧ ವೇಣೂರು, ಉಪ್ಪಿನಂಗಡಿ, ಅರೆಹಳ್ಳಿ ಹಾಗೂ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗಳು ಸೇರಿದಂತೆ ಒಟ್ಟು 16 ಕಳವು ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣದ ಕುರಿತು ಬೆಳ್ತಂಗಡಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

























