ವಿಟ್ಲ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬಾಲಗೋಕುಲ ವಿಟ್ಲ ಕ್ಷೇತ್ರ ಸಮಿತಿ ಹಾಗೂ ಮೈತ್ರೇಯಿ ಗುರುಕುಲಂ, ಮೂರುಕಜೆ ಇವರ ಸಹಯೋಗದಲ್ಲಿ ವಿಟ್ಲ ಪರಿಸರದ ವಿವಿಧ ಬಾಲಗೋಕುಲಗಳ ಮಕ್ಕಳ ಶೋಭಾಯಾತ್ರೆ ಶುಕ್ರವಾರ ನಡೆಯಿತು.
ವಿಟ್ಲದ ಪ್ರಮುಖ ಬೀದಿಗಳಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಬಾಲಗೋಕುಲದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಬಳಿಕ ವಿಟ್ಲದ ವಿಠ್ಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ಧಾರ್ಮಿಕ ಸಭೆ ನಡೆಯಿತು.
ಶೋಭಾಯಾತ್ರೆಯನ್ನು ಅನೂಪ್ ಜುವೆಲ್ಲರಿಯ ಪುರಂದರ ಆಚಾರ್ಯ ಉದ್ಘಾಟಿಸಿದರು. ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟಕೃಷ್ಣ ಶರ್ಮ ಅವರು ದೀಪ ಬೆಳಗಿಸುವ ಮೂಲಕ ಧಾರ್ಮಿಕ ಸಭೆಗೆ ಚಾಲನೆ ನೀಡಿದರು.
ಮೂರುಕಜೆ ಅಜೇಯ ಟ್ರಸ್ಟ್‌ನ ಕಾರ್ಯದರ್ಶಿ ರೂಪಲೇಖ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಯಕ್ಷಧ್ರುವ ಯಕ್ಷ ಶಿಕ್ಷಣ, ಪಟ್ಲ ಫೌಂಡೇಶನ್‌ನ ಸಂಚಾಲಕಿ ಸಾಯಿಸುಮ ಎಂ. ನಾವಡ ಧಾರ್ಮಿಕ ಭಾಷಣ ಮಾಡಿದರು.
ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಸತೀಶ್ ವಿಟ್ಲ ಹಾಗೂ ವಿಟ್ಲ ಅಕ್ಷಯ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಮೋನಪ್ಪ ಗೌಡ ಶಿವಾಜಿನಗರ ಭಾಗವಹಿಸಿದ್ದರು.
ಬಾಲಗೋಕುಲ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಕೂಡೂರು ಹಾಗೂ ಗೌರವಾಧ್ಯಕ್ಷ ಹರೀಶ್ ಸಿ.ಹೆಚ್. ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಮಂಜುನಾಥ ಕಲ್ಲಕಟ್ಟ ಸ್ವಾಗತಿಸಿದರು. ಪರಮೇಶ್ವರ ಆಚಾರ್ಯ ಪ್ರಸ್ತಾವಿಸಿದರು. ಕೋಶಾಧಿಕಾರಿ ಶಿಶಿರ್ ಅನಿಲಕಟ್ಟೆ ವಂದಿಸಿದರು. ರಾಧಾಕೃಷ್ಣ ಎರುಂಬು ಕಾರ್ಯಕ್ರಮ ನಿರೂಪಿಸಿದರು.





























