ಮೂಡುಬಿದಿರೆ: ಕೋಟೆಬಾಗಿಲು ವೀರ ಮಾರುತಿ ದೇವಸ್ಥಾನದ ಬಳಿಯ ತಿರುವಿನಲ್ಲಿ ಸ್ಕೂಟರ್ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಯೊಬ್ಬರು ಮೃತಪಟ್ಟ ಘಟನೆ ಬುಧವಾರ ಸಂಜೆ ನಡೆದಿದೆ.
ಮೃತರನ್ನು ಕೋಟೆಬಾಗಿಲು ನಿವಾಸಿ ಸುಧಾಕರ ಹೆಗ್ಡೆ ಅವರ ಪುತ್ರ, ಜೈನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಶ್ಚಿತ್ ಹೆಗ್ಡೆ (17) ಎಂದು ಗುರುತಿಸಲಾಗಿದೆ.
ಶಿರ್ತಾಡಿ ಕಡೆಯಿಂದ ಕೋಟೆಬಾಗಿಲು ಕಡೆಗೆ ಪ್ರಶ್ಚಿತ್ ಹೆಗ್ಡೆ ಹಾಗೂ ದೀಕ್ಷಿತ್ ಹೆಗ್ಡೆ ಸ್ಕೂಟರ್‌ನಲ್ಲಿ ಬರುತ್ತಿದ್ದ ವೇಳೆ ತಿರುವಿನಲ್ಲಿ ಸ್ಕೂಟರ್ ಬಿದ್ದಿದೆ ಎನ್ನಲಾಗಿದೆ. ಅಪಘಾತದಲ್ಲಿ ಪ್ರಶ್ಚಿತ್ ಅವರ ತಲೆಗೆ ತೀವ್ರ ಗಾಯವಾಗಿದ್ದು, ದೀಕ್ಷಿತ್ ಅವರ ತಲೆಗೂ ಗಾಯಗಳಾಗಿವೆ.
ತಕ್ಷಣ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ, ಪ್ರಶ್ಚಿತ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




























