ಪೆರುವಾಜೆ: ಸುಳ್ಯ, ಪುತ್ತೂರು ಹಾಗೂ ಕಡಬ ತಾಲೂಕುಗಳ 21 ಗ್ರಾಮಗಳ ಮಾಗಣೆ ಕ್ಷೇತ್ರವಾದ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ನವರಾತ್ರಿ ಉತ್ಸವ ಹಲವು ವೈಶಿಷ್ಟ್ಯಗಳಿಂದ ಗಮನ ಸೆಳೆಯುತ್ತಿದೆ. ಈ ಬಾರಿ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ದೇವಿಗೆ ಅಕ್ಕಿ ಸಮರ್ಪಿಸುವ ಹರಿವಾಣ ಸೇವೆ ವಿಶೇಷವಾಗಿದೆ.
ದೇವಸ್ಥಾನದ ಕೌಂಟರ್‌ನಲ್ಲಿ ರೂ. 100ರ ರಶೀದಿ ಪಡೆದು, ಅಕ್ಕಿ ತುಂಬಿದ ಹರಿವಾಣವನ್ನು ಹಿಡಿದು ದೇವಾಲಯಕ್ಕೆ ಒಂದು ಸುತ್ತು ಪ್ರದಕ್ಷಿಣೆ ಹಾಕಿ, ದೇವಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಹರಿವಾಣದಲ್ಲಿರುವ ಅಕ್ಕಿಯನ್ನು ಹುಂಡಿಗೆ ಸಮರ್ಪಿಸುವುದು ಈ ಸೇವೆಯ ವಿಧಾನವಾಗಿದೆ. ಈ ಅಕ್ಕಿಯನ್ನು ದೇವರ ನೈವೇದ್ಯಕ್ಕೆ ಬಳಸಲಾಗುತ್ತದೆ.
ತಮ್ಮ ಮನದ ಅಭೀಷ್ಟಗಳನ್ನು ದೇವಿಯ ಮುಂದಿಟ್ಟು ಭಕ್ತಿಯಿಂದ ಅಕ್ಕಿ ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿದರೆ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ನವರಾತ್ರಿಯ ಪವಿತ್ರ ಸಂದರ್ಭದಲ್ಲಿ ಜಲದುರ್ಗಾದೇವಿಯ ದರ್ಶನದೊಂದಿಗೆ ಈ ವಿಶೇಷ ಸೇವೆಯಲ್ಲಿ ಪಾಲ್ಗೊಂಡು ಕೃಪೆಗೆ ಪಾತ್ರರಾಗಲು ಭಕ್ತರಿಗೆ ದೊರೆತ ಅಪೂರ್ವ ಅವಕಾಶ ಇದಾಗಿದೆ.



























