ಬೆಳ್ತಂಗಡಿ : ಭಾರತೀಯ ರಿಸರ್ವ್ ಬ್ಯಾಂಕ್ ನಿಯೋಜಿತ ಸ್ವಯಂ ನಿಯಂತ್ರಕ ಸಂಸ್ಥೆಯಾದ ಸಾಧನ್ ಸಂಸ್ಥೆಯು ಇತ್ತೀಚೆಗೆ ದೆಹಲಿಯಲ್ಲಿ ಆಯೋಜಿಸಿದ 21ನೇ ರಾಷ್ಟ್ರೀಯ ಸಮಾವೇಶದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ `2025-2026ರ ಸಾಲಿನ ಅತ್ಯುತ್ತಮ ಮಹಿಳಾ ಸ್ನೇಹಿ ಆರ್ಥಿಕ ಸಂಸ್ಥೆ – ಇಲಾಬೆನ್ ಸ್ಮಾರಕ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ಯು ಮಹಿಳಾ ಕಾರ್ಯಕರ್ತರಿಗೆ ಅತೀ ಸುರಕ್ಷಿತ ಕಾರ್ಯಸ್ಥಳ ಮತ್ತು ಉತ್ತಮ ಬಾಂಧವ್ಯದ ವಾತಾವರಣವನ್ನು ನೀಡುವ ಮೂಲಕ ದೇಶಕ್ಕೆ ಮಾದರಿಯಾದ ಒಂದು ಸಂಸ್ಥೆಯಾಗಿರುವ ಹಿನ್ನೆಲೆಯಲ್ಲಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದೆ.
ಈ ಪ್ರಶಸ್ತಿಯನ್ನು ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅನಿಲ್ ಕುಮಾರ್ ಎಸ್.ಎಸ್., ಯೋಜನೆಯ ಮುಖ್ಯ ಹಣಕಾಸು ಅಧಿಕಾರಿಗಳಾದ ಶಾಂತರಾಮ್ ಆರ್. ಪೈ, ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ಗೀತಾ ಬಿ. ಮತ್ತು ಶ್ರೀಮತಿ ದಯಾಶೀಲರವರು ಸ್ವೀಕರಿಸಿದರು.



























