ಬೆಳ್ತಂಗಡಿ: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ, ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸಿದ ನ್ಯಾಯವಾದಿಗಳು ಹಾಗೂ ಹೋರಾಟಗಾರರಿಗೆ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ಅ.10ರಂದು ಬೆಳ್ತಂಗಡಿಯಲ್ಲಿ ಗೌರವ ಅಭಿನಂದನಾ ಸಭೆ ಹಾಗೂ ‘ನ್ಯಾಯದ ನಡಿಗೆ’ ಮೌನ ಮೆರವಣಿಗೆ ನಡೆಯಿತು.
ಬೆಳಗ್ಗೆ 11 ಗಂಟೆಗೆ ಉಜಿರೆಯ ಕುಂಜರ್ಪದಿಂದ ಆರಂಭಗೊಂಡ ಮೌನ ಮೆರವಣಿಗೆಯು ಬೆಳ್ತಂಗಡಿ ಮುಖ್ಯ ರಸ್ತೆಯ ಮೂಲಕ ಸಾಗಿ ತಾಲೂಕು ಕ್ರೀಡಾಂಗಣ ತಲುಪಿತು. ಬಳಿಕ ನಡೆದ ಅಭಿನಂದನಾ ಸಭೆಯಲ್ಲಿ ಸೌಜನ್ಯ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಮಹಿಳಾ ಹೋರಾಟಗಾರ್ತಿ ಪ್ರಸನ್ನ ರವಿ, ಹೈಕೋರ್ಟ್ ನ್ಯಾಯವಾದಿ ಮೋಹಿತ್ ಕುಮಾರ್, ದೈವ ಚಿಂತಕ ತಮ್ಮಣ್ಣ ಶೆಟ್ಟಿ ಹಾಗೂ ಸೌಜನ್ಯಳ ತಾಯಿ ಕುಸುಮಾವತಿ ಮಾತನಾಡಿ, ಪ್ರಕರಣದಲ್ಲಿ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ನ್ಯಾಯವಾದಿಗಳಾದ ವಿಜಯ ವಾಸು ಪೂಜಾರಿ, ನವೀನ್ ಕುಮಾರ್, ದಿನೇಶ್ ಗಾಣಿಗ ಕುಂದಾಪುರ, ನೀತಿ ತಂಡದ ಜಯಂತ್ ಟಿ., ಅಹೋರಾತ್ರ, ಸುಪ್ರೀಂಕೋರ್ಟ್ ನ್ಯಾಯವಾದಿ ಶೇಖರ್ ಜಿ. ದೇವಸ್ಯ ಅವರ ಸಹೋದರ ಕೃಷ್ಣಪ್ಪ ಗೌಡ ದೇವಸ್ಯ ಹಾಗೂ ಮುಂಬೈನಲ್ಲಿ ಸೌಜನ್ಯ ಪರ ಜನರನ್ನು ಒಗ್ಗೂಡಿಸಿದ ಸುರೇಶ್ ಎಯ್ಯಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸೌಜನ್ಯ ಪ್ರಕರಣದಲ್ಲಿ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುವ ಉದ್ದೇಶದಿಂದ ನಡೆದ ಈ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.



























