ಮಂಗಳೂರು: ಮಂಗಳೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅಕ್ಟೋಬರ್ 11ರಿಂದ 21ರವರೆಗೆ ಪ್ರತಿದಿನ ಸಂಜೆ 4 ಗಂಟೆಯಿಂದ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಗಣ್ಯರು ಹಾಗೂ ಸಾವಿರಾರು ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಕೂಳೂರು ಫೆರಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿರುವುದರಿಂದ, ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮಂಗಳೂರು ನಗರ ಪೊಲೀಸ್ ಇಲಾಖೆ ಸೂಚನೆ ನೀಡಿದೆ.
ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿರುವ ರಸ್ತೆ
ಕೂಳೂರು ಫೆರಿ ರಸ್ತೆಯ ಕಾರ್‌ಸ್ಟ್ರೀಟ್–ಬಾಲಾಜಿ ಜಂಕ್ಷನ್–ನ್ಯೂ ಚಿತ್ರಾ ಜಂಕ್ಷನ್–ಅಳಕೆ ಬ್ರಿಡ್ಜ್–ಕುದ್ರೋಳಿ ದೇವಸ್ಥಾನದ ದ್ವಾರ–ದುರ್ಗಾಮಹಲ್ ಜಂಕ್ಷನ್–ಮಣ್ಣಗುಡ್ಡೆ ಜಂಕ್ಷನ್ ಮಾರ್ಗದಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.
ಪರ್ಯಾಯ ಮಾರ್ಗಗಳು
- ಕೊಟ್ಟಾರ ಚೌಕಿಯಿಂದ ಕಾರ್‌ಸ್ಟ್ರೀಟ್ ಕಡೆಗೆ: ಲಾಲ್‌ಬಾಗ್–ಪಿ.ವಿ.ಎಸ್.–ನವಭಾರತ್ ಮಾರ್ಗವಾಗಿ ಸಂಚರಿಸಬೇಕು.
- ಕಾರ್‌ಸ್ಟ್ರೀಟ್‌ನಿಂದ ಕೂಳೂರು ಫೆರಿ ರಸ್ತೆ ಕಡೆಗೆ: ನವಭಾರತ್–ಪಿ.ವಿ.ಎಸ್. ಮಾರ್ಗವನ್ನು ಬಳಸಬೇಕು.
ವಾಹನ ನಿಲುಗಡೆಗೆ ನಿರ್ಬಂಧ : ಕೂಳೂರು ಫೆರಿ ರಸ್ತೆಯಲ್ಲಿ ನ್ಯೂ ಚಿತ್ರಾ ಜಂಕ್ಷನ್‌ನಿಂದ ಲೇಡಿಹಿಲ್‌ವರೆಗೆ ಹಾಗೂ ಈ ರಸ್ತೆಯನ್ನು ಸಂಪರ್ಕಿಸುವ ರಸ್ತೆಗಳ ಎರಡೂ ಬದಿಗಳಲ್ಲಿ ವಾಹನ ನಿಲುಗಡೆ ಮಾಡುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ತಮ್ಮ ವಾಹನಗಳನ್ನು ನಿಗದಿಪಡಿಸಿದ ಪಾರ್ಕಿಂಗ್ ಸ್ಥಳಗಳಲ್ಲಿಯೇ ನಿಲುಗಡೆ ಮಾಡಬೇಕು ಎಂದು ಸೂಚಿಸಲಾಗಿದೆ.
ವಾಹನ ದಟ್ಟಣೆ ನಿಯಂತ್ರಣ ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಯ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.ದಸರಾ ಮಹೋತ್ಸವದ ಸಂದರ್ಭದಲ್ಲಿ ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಿ, ಪರ್ಯಾಯ ಮಾರ್ಗಗಳನ್ನು ಬಳಸುವ ಮೂಲಕ ಸುಗಮ ವಾಹನ ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.



























