ಪುತ್ತೂರು: ಕಸಬಾ ಗ್ರಾಮದ ಮುಖ್ಯ ರಸ್ತೆಯಲ್ಲಿರುವ, ಕಾಸರಗೋಡಿನಲ್ಲಿ ವಾಸವಿರುವ ರಶ್ಮಿ ಬಿ. ಭಟ್ ಅವರಿಗೆ ಸೇರಿದ ಖಾಲಿ ಮನೆಯೊಂದಕ್ಕೆ ಬೆಂಕಿ ತಗುಲಿ ಸುಮಾರು ₹10 ಲಕ್ಷ ನಷ್ಟ ಸಂಭವಿಸಿರುವ ಘಟನೆ ಬೆಳಕಿಗೆ ಬಂದಿದೆ. ಇದೇ ವೇಳೆ ಮನೆಯಲ್ಲಿದ್ದ ಸುಮಾರು ₹30 ಸಾವಿರ ಮೌಲ್ಯದ ವಸ್ತುಗಳು ಕಳವಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಮನೆಯ ಮಾಲಕಿ ರಶ್ಮಿ ಬಿ. ಭಟ್ ಅವರು ಸೆ. 15ರಂದು ಕೊನೆಯದಾಗಿ ಮನೆಗೆ ಭೇಟಿ ನೀಡಿದ್ದರು. ಅ. 11ರಂದು ಬೆಳಗ್ಗೆ ಅವರ ದೊಡ್ಡಪ್ಪನ ಮಗ ಎನ್.ಟಿ. ಕಿಶೋರ್ ಕರೆ ಮಾಡಿ ಮನೆಗೆ ಬೆಂಕಿ ಬಿದ್ದಿರುವುದಾಗಿ ಮಾಹಿತಿ ನೀಡಿದ್ದರು. ತಕ್ಷಣ ಪತಿಯೊಂದಿಗೆ ಪುತ್ತೂರಿಗೆ ಆಗಮಿಸಿ ಪರಿಶೀಲಿಸಿದಾಗ, ಮನೆಯ ಹಿಂಭಾಗದಲ್ಲಿದ್ದ ಎರಡು ಬೆಡ್ರೂಮ್ಗಳು, ಎರಡು ಬಾತ್ರೂಮ್ಗಳು ಹಾಗೂ ತೆರೆದ ಹಾಲ್ನಂತಿರುವ ಛಾವಣಿ ಬೆಂಕಿಯಿಂದ ಸುಟ್ಟು ಕರಕಲಾಗಿರುವುದು ಕಂಡುಬಂದಿದೆ.
ಇದಲ್ಲದೆ, ಮನೆಯ ಹಿಂಭಾಗದ ಅಡುಗೆಮನೆಯ ಬಾಗಿಲಿನ ಕೆಳಭಾಗದ ಹಲಗೆಯನ್ನು ತೆಗೆದಿರುವುದು, ವಿದ್ಯುತ್ ಸ್ವಿಚ್ಬೋರ್ಡ್ಗಳನ್ನು ಜಖಂಗೊಳಿಸಿ ವೈರ್ಗಳನ್ನು ಕೊಂಡೊಯ್ದಿರುವುದು ಗಮನಕ್ಕೆ ಬಂದಿದೆ. ಐದು ಸೀಲಿಂಗ್ ಫ್ಯಾನ್ಗಳು, ಎರಡು ದೊಡ್ಡ ದೀಪಗಳು, ಆರತಿ ಸಾಮಗ್ರಿಗಳು ಹಾಗೂ ಎರಡು ಹಿತ್ತಾಳೆಯ ತಟ್ಟೆಗಳು ಕಾಣೆಯಾಗಿವೆ. ದುರಸ್ತಿಗಾಗಿ ಮನೆಯಲ್ಲಿಟ್ಟಿದ್ದ ಫ್ರಿಡ್ಜ್ ಮತ್ತು ಮೈಕ್ರೋವೇವ್ಗಳನ್ನು ಕಳಚಿ ಪರಿಶೀಲಿಸಿರುವ ಗುರುತುಗಳೂ ಪತ್ತೆಯಾಗಿವೆ.
ಸೆ. 15ರ ಸಂಜೆ 4 ಗಂಟೆಯಿಂದ ಅ. 11ರ ನಸುಕಿನ 2.45 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಮನೆಗೆ ನುಗ್ಗಿ ವಸ್ತುಗಳನ್ನು ಕಳವು ಮಾಡಿರುವ ಶಂಕೆಯನ್ನು ದೂರಿನಲ್ಲಿ ವ್ಯಕ್ತಪಡಿಸಲಾಗಿದೆ. ಕಳವಾದ ವಸ್ತುಗಳ ಅಂದಾಜು ಮೌಲ್ಯ ₹30 ಸಾವಿರವಾಗಿದ್ದು, ಬೆಂಕಿ ಅವಘಡದಿಂದ ಸುಮಾರು ₹10 ಲಕ್ಷ ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಮನೆಗೆ ನುಗ್ಗಿ ಕಳವು ಮಾಡಿದವರನ್ನು ಪತ್ತೆಹಚ್ಚಿ, ಕಳವಾದ ವಸ್ತುಗಳನ್ನು ವಶಪಡಿಸಿಕೊಳ್ಳಬೇಕು. ಅಲ್ಲದೆ, ಮನೆಗೆ ಬೆಂಕಿ ತಗುಲಿದ ಬಗ್ಗೆ ಸಮಗ್ರ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರಶ್ಮಿ ಬಿ. ಭಟ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಮನವಿ ಮಾಡಿದ್ದಾರೆ.



























