ನವದೆಹಲಿ: ಅಧಿವೇಶನದ ನಡುವೆ ಮಂಗಳವಾರ ಬಿಜೆಪಿ ಸಂಸದರ ಬೈಠಕ್ ನಡೆಯಿತು. ದೇಶಕ್ಕೆ ಸ್ವತಂತ್ರ ಬಂದು 75 ವರ್ಷ ಪೂರೈಸುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಸದರಿಂದ ನೂತನ ಟಾಸ್ಕ್ ನೀಡಿದ್ದಾರೆ.
2047ಕ್ಕೆ ಭಾರತಕ್ಕೆ ಸ್ವತಂತ್ರ ಸಿಕ್ಕು 100 ವರ್ಷ ಆಗುವ ವೇಳೆ ಭಾರತ ಹೇಗೆ ಅಭಿವೃದ್ಧಿ ಹೊಂದಿರುತ್ತೆ ಎಂಬುದರ ಬಗ್ಗೆ ಜನರಿಂದ ನೇರವಾಗಿ ಮಾಹಿತಿ ಸಂಗ್ರಹಿಸಿ. ಪ್ರತಿ ವಿಧಾನಸಭಾ ಕ್ಷೇತ್ರದಿಂದ ಇಬ್ಬರ ಕಾರ್ಯಕರ್ತರ ಜೋಡಿಯನ್ನು ಸಿದ್ಧಪಡಿಸಬೇಕು. ಈ ಜೋಡಿ 75 ಗ್ರಾಮಗಳ ಪ್ರವಾಸ ಮಾಡಿ ಒಂದು ಪಟ್ಟಿಯನ್ನು ಸಿದ್ಧಪಡಿಸಬೇಕು. ಡಿಜಿಟಲ್ ಲಿಟ್ರೆಸೆಯಲ್ಲಿ ದೇಶ ಎಲ್ಲಿಯವರೆಗೂ ತಲುಪಿದೆ ಮತ್ತು ಎಲ್ಲಿಯವರೆಗೂ ತಲುಪಬಹುದು ಮಾಹಿತಿಯನ್ನು ಆ ಪಟ್ಟಿ ಒಳಗೊಂಡಿರಬೇಕು. ಈ ವೇಳೆ ದೇಶಕ್ಕಾಗಿ ನಾನೇನು ಮಾಡಬಲ್ಲೆ ಅನ್ನೋ ಭಾವನೆಯನ್ನು ಜನರಲ್ಲಿ ಹುಟ್ಟು ಹಾಕಬೇಕು ಎಂದು ಪ್ರಧಾನಿಗಳು ಬೈಠಕ್ ನಲ್ಲಿ ಹೇಳಿದ್ದಾರೆ.
ಕಾರ್ಯಕ್ರಮ ಜನಾಂದೋಲನ ಆಗಬೇಕು:
ದೇಶಕ್ಕೆ ಸ್ವತಂತ್ರ ಬಂದ ಈ ಸಂದರ್ಭದಲ್ಲಿ ಮಾಡುತ್ತಿರುವ ಕಾರ್ಯಕ್ರಮ ಜನಾಂದೋಲನವಾಗಬೇಕು. 75 ವರ್ಷದ ಸಂಭ್ರಮಾಚರಣೆಯಲ್ಲಿ 75 ಗ್ರಾಮಗಳಿಗೆ ಭೇಟಿ ನೀಡಿ, ಅಲ್ಲಿ ಜನತೆಯೊಂದಿಗೆ 75 ಗಂಟೆ ಸಮಯ ಕಳೆಯಿರಿ. ಈ ಸಮಯದಲ್ಲಿ ದೇಶದ ಸಾಧನೆಗಳು ಸೇರಿದಂತೆ ಎಲ್ಲ ಮಾಹಿತಿಯನ್ನು ಹಂಚಿಕೊಳ್ಳಿ. ಆದ್ರೆ ಇದು ಸರ್ಕಾರಿ ಕಾರ್ಯಕ್ರಮ ಆಗದಂತೆ ಎಚ್ಚರಿಕೆ ವಹಿಸಬೇಕು. ಈ ವಿಶೇಷ ಕಾರ್ಯಕ್ರಮದಲ್ಲಿ ಹೆಚ್ಚು ಜನರು ಭಾಗಿಯಾಗುವಂತೆ ನೋಡಿಕೊಳ್ಳುವ ಮೂಲಕ ಜನ ಆಂದೋಲನವಾಗಿ ಬದಲಾಗಬೇಕೆಂದು ಸಂಸದರಿಗೆ ಪ್ರಧಾನಿಗಳು ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಇದೇ ಬೈಠಕ್ ನಲ್ಲಿ ವಿಪಕ್ಷ ನಾಯಕರ ಕೆಲಸಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿ, ಅವರನ್ನ ಇಕ್ಕಟ್ಟಿನಲ್ಲಿ ಸಿಲುಕಿಸುವ ತಂತ್ರಗಾರಿಕೆ ಮಾಡಬೇಕು. ಪ್ರತಿಬಾರಿಯೂ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದ ಚರ್ಚೆಗಳಿಗೆ ನೀವೆಲ್ಲರೂ ಸಿದ್ಧರಾಗಿರಬೇಕು ಎಂದು ಸಂಸದರಿಗೆ ಪಾಠ ಮಾಡಿದ್ದಾರೆ. ಆಗಸ್ಟ್ 15ರ ಹೊಸ ಟಾಸ್ಕ್ ನ್ನು ಆಗಸ್ಟ್ 15ರ ದ್ವಜಾರೋಹಣದ ಬಳಿಕ ಪ್ರಧಾನಿಗಳು ಬಹಿರಂಗವಾಗಿ ಘೋಷಣೆ ಮಾಡುವ ಸಾಧ್ಯತೆಗಳಿವೆ.