ಪುತ್ತೂರು: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ಸಹಸಂಸ್ಥೆಯಾದ ಶ್ರೀಸರಸ್ವತಿ ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು ಮತ್ತು ಪ್ರಣವ ಸೌಹಾರ್ದ ಸಹಕಾರಿಯ ಅಂಗ ಸಂಸ್ಥೆ ಪ್ರಣವ ಚಾರಿಟೇಬಲ್ ಟ್ರಸ್ಟ್ (ರಿ.) ಇವರ ಸಂಯುಕ್ತಾಶ್ರಯದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಮಂಗಳೂರು ಇವರ ಸಹಯೋಗದೊಂದಿಗೆ ನಿರುದ್ಯೋಗಿ ಯುವಕ ಯುವತಿಯರಿಗೆ ದರ್ಬೆಯ ಸಚ್ಚಿದಾನಂದ ಸೇವಾಸದನ ಸಭಾಂಗಣದಲ್ಲಿ ‘ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಶಿಬಿರ’ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಸರಸ್ವತಿ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ದೇವಿಪ್ರಸಾದ್ ಕೆ ಜೀವನದಲ್ಲಿ ಬರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕು ಮತ್ತು ಸ್ಪಷ್ಟ ಗುರಿ ಮತ್ತು ಯೋಜನೆಗಳೊಂದಿಗೆ ನಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡು ಯಶಸ್ಸನ್ನು ಸಾಧಿಸುವಲ್ಲಿ ಅವಿರತವಾಗಿ ಶ್ರಮಿಸಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಣವ ಸಹಕಾರಿ ಅಧ್ಯಕ್ಷರಾದ ಜಿ ಎಲ್ ಪ್ರಸಾದ್ ಅಭ್ಯರ್ಥಿಗಳು ತಮ್ಮ ಕೌಶಲ್ಯಗಳನು ಅಭಿವೃಧ್ಧಿಪಡಿಸಿಕೊಂಡು ಇಲಾಖೆಗಳ ಯೋಜನೆಗಳ ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಸ್ವಾವಲಂಬಿಗಳಾಗಿ ಸದೃಢ ಸಮಾಜವನ್ನು ನಿರ್ಮಿಸುವಂತವರಾಗಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೆನರ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕರಾದ ರಂಜಿತ್ ಕುಮಾರ್ ಜೀನಾ ಬ್ಯಾಂಕಿನ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಕೌಶಲ್ಯಾಭಿವೃಧ್ಧಿ ಮತ್ತು ಜೀವನೋಪಾಯ ಇಲಾಖೆ ಮಂಗಳೂರು ಇದರ ಜಂಟಿ ನಿರ್ದೇಶಕರಾದ ಅರವಿಂದ ಬಾಳೇರಿ ಇಲಾಖೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಕೆನರ ಬ್ಯಾಂಕಿನ ವಿಭಾಗೀಯ ವ್ಯವಸ್ಥಾಪಕರಾದ ಎಂ ಪಿ ಪ್ರವೀಣ್ ಬ್ಯಾಂಕಿನ ವಿವಿಧ ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಶ್ರೀಸರಸ್ವತಿ ಸಹಕಾರಿಯ ವೃತ್ತಿಪರ ನಿರ್ದೇಶಕರಾದ ವೇದವ್ಯಾಸ ಕೆ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ನಿಧಿ ಫುಡ್ ಪ್ರಾಡಕ್ಟ್ಸ್ ಮಾಲಕರಾದ ರಾಧಾಕೃಷ್ಣ, ಟೈಲರಿಂಗ್ ತರಬೇತುದಾರರಾದ ಮತ್ತು ವಿವಿಧ ಸೇವಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಶ್ರೀಮತಿ ರೋಹಿಣಿ ಆಚಾರ್ಯ ಶಿಭಿರಾರ್ಥಿಗಳಿಗೆ ತಮ್ಮ ಸಾಧನಾಗಾಥೆಯನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಸುಮಾರು 70 ಜನರು ಭಾಗವಹಿಸಿದ್ದರು.
ಕುಮಾರಿ ಸಾಯೀಶ್ವರಿ ಪ್ರಾರ್ಥಿಸಿದರು, ಪ್ರಣವ ಸೌಹಾರ್ಧ ಸಹಕಾರಿಯ ಜಿ ಎಲ್ ಪ್ರಸಾದ್ ಸ್ವಾಗತಿಸಿದರು, ಸೋಮಪ್ಪ ನಾಯ್ಕ್ ವಂದಿಸಿದರು, ಶ್ರೀಸರಸ್ವತಿ ಚಾರಿಟೇಬಲ್ ಟ್ರಸ್ಟ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಬಿಪಿನ್ ಚಂದ್ರ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಣವ ಸಹಕಾರಿಯ ಪುತ್ತೂರು ಶಾಖೆಯ ವ್ಯವಸ್ಥಾಪಕರಾದ ರೇಖನಾಥ್ ಸಹಕರಿಸಿದರು.