ಕಡಬ: ಆಸ್ತಿ ವಿಚಾರದಲ್ಲಿ ಅಣ್ಣನಿಗೆ ತಮ್ಮ ತಲವಾರುನಿಂದ ಕಡಿದು ಗಾಯಗೊಳಿಸಿದ ಘಟನೆ ಆ.27 ರಂದು ರಾತ್ರಿ ರೆಂಜಿಲಾಡಿ ಗ್ರಾಮದ ಪದಕ ಎಂಬಲ್ಲಿ ನಡೆದಿದೆ.ರೆಂಜಿಲಾಡಿ ಗ್ರಾಮದ ಪದಕ ನಿವಾಸಿ ಶೇಷಪ್ಪ ಗೌಡ ಎಂಬವರ ಪುತ್ರ ಲಕ್ಷ್ಮಣ ಗೌಡ(55ವ.) ಎಂಬವರು ತಲವಾರುನಿಂದ ಹಲ್ಲೆಗೊಳಗಾಗಿ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಆರೋಪಿ ಪ್ರಭಾಕರ ವಿರುದ್ದ ಐಪಿಸಿ ಸೆಕ್ಷನ್ ೩೨೪,೫೦೬ ಪ್ರಕಾರ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ತಿ ವಿಚಾರದಲ್ಲಿ ಸಹೋದರರ ಮಧ್ಯೆ ಆಗಾಗ ಜಗಳ ನಡೆಯುತ್ತಿದ್ದು ಈ ಸಂಬಂಧ ಆರೋಪಿ ಪ್ರಭಾಕರ ಇರುವ ಮನೆಗೆ ಆ.೨೭ರ ರಾತ್ರಿ ಸಹೋದರರಾದ ಲಕ್ಷ್ಮಣ ಗೌಡ ಹಾಗೂ ಭಾಸ್ಕರ ಗೌಡ ಬಂದಿದ್ದು ಈ ವೇಳೆ ಪ್ರಭಾಕರ ತಲವಾರಿನಿಂದ ತನ್ನ ಸಹೋದರ ಭಾಸ್ಕರ ಎಂಬವರಿಗೆ ಕಡಿಯಲು ಯತ್ನಿಸಿದ ವೇಳೆ ಲಕ್ಷ್ಮಣ ಗೌಡ ಅಡ್ಡ ಬಂದಿದ್ದು ಅವರಿಗೆ ಗಾಯವಾಗಿದೆ, ಈ ವೇಳೆ ಭಾಸ್ಕರ ಹಲ್ಲೆಯಿಂದ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಆರೋಪಿ ಪ್ರಭಾಕರ ಕೂಡ ಕಡಬ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಗ್ಗೆ ಮಾಹಿತಿ ದೊರಕಿದೆ.
ಪ್ರಕರಣದ ಸಾರಾಂಶ: ಪ್ರಕರಣದ ಕುರಿತು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳು ಲಕ್ಷ್ಮಣ ಗೌಡರವರು ಪೋಲಿಸರಿಗೆ ಹೇಳಿಕೆ ನೀಡಿ, ನಾನು ಶ್ರೀ ಧರ್ಮಸ್ಥಳ ಅನ್ನ ಛತ್ರದಲ್ಲಿ ಅಡುಗೆ ಕೆಲಸಮಾಡಿಕೊಂಡಿದ್ದು ತನ್ನ ತಂದೆಯ ಜಮೀನಿನನ್ನು ನನ್ನ ತಮ್ಮ ಪ್ರಭಾಕರನು ನನಗೆ ಪಾಲು ಕೊಡದೇ ಇದ್ದು ಈ ವಿಚಾರವಾಗಿ ತಮ್ಮ ಪ್ರಭಾಕರನೊಂದಿಗೆ ಆಗಾಗ ತಕರಾರುಗಳಾಗುತ್ತಿತ್ತು, ಇದರಿಂದ ಬೇಸರಗೊಂಡಿದ್ದ ನನ್ನ ಪತ್ನಿ ತವರು ಮನೆಗೆ ಹೋಗಿದ್ದಾಳೆ, ಅಲ್ಲದೆ ನನ್ನ ಇನ್ನೋರ್ವ ಸಹೋದರ ಭಾಸ್ಕರನು ಆರೋಪಿ ಪ್ರಭಾಕರನ ಕಿರುಕುಳ ತಾಳಾಲಾರದೆ ಮನೆ ಸಮೀಪದಲ್ಲಿಯೇ ಬಾಡಿಗೆ ಮನೆಯಲ್ಲಿಯೇ ವಾಸಿಸಿಕೊಂಡಿದ್ದಾನೆ.
ನಾವು ಕೆಲಸದ ಬಿಡುವಿನ ವೇಳೆಯಲ್ಲಿ ಮನೆಗೆ ಬಂದು ಹೋಗುತ್ತಿದ್ದು ಅದರಂತೆ ಆ. ೨೭ ರಾತ್ರಿ ಸುಮಾರು 8 ಗಂಟೆಗೆ ಮನೆಗೆ ಬಂದ ಸಮಯ ನನ್ನ ಸಹೋದರ ಭಾಸ್ಕರನು ಕೂಡ ಬಂದಿದ್ದ ಈ ಸಮಯದಲ್ಲಿ ನಾವು ಮನೆಯ ಅಂಗಳದಲ್ಲಿದ್ದಾಗ ತಮ್ಮನಾದ ಭಾಸ್ಕರನು ಮನೆಯ ಒಳಗಿನಿಂದ ಮನೆ ಸಾಮಾಗ್ರಿಗಳನ್ನು ತೆಗೆದುಕೊಂಡು ಬರಲು ಮನೆಯ ಒಳಗೆ ಹೋಗುತ್ತಿದ್ದಾಗ ಮನೆಯ ಅಂಗಳದಲ್ಲಿ ಜೀಪಿನ ಬಳಿ ನಿಂತುಕೊಂಡಿದ್ದ ಪ್ರಭಾಕರನು ಜೀಪಿನಿಂದ ತಲವಾರನ್ನು ತೆಗೆದುಕೊಂಡು ಬಂದು ಭಾಸ್ಕರನಿಗೆ ಕಡಿಯಲೆಂದು ಹೋದಾಗ ನಾನು ತಡೆಯಲು ಮುಂದಾದೆ, ಈ ವೇಳೆ ಪ್ರಭಾಕರನು ನನ್ನ ಕುತ್ತಿಗೆಯ ಕಡೆಗೆ ತಲವಾರು ಬೀಸಿದಾಗ ಬಗ್ಗಿ ತಪ್ಪಿಸಿಕೊಂಡಿದ್ದು ಪುನ: ಪ್ರಭಾಕರನು ಕಡಿಯಲು ಪ್ರಯತ್ನಿಸಿದಾಗ ನನ್ನ ಬಲ ಕೈಯನ್ನು ಅಡ್ಡ ಹಿಡಿದಾಗ ತಲವಾರು ನನ್ನ ಮುಂಗೈಗೆ ತಾಗಿ ಗಾಯಗೊಂಡಿರುತ್ತೇನೆ, ಬಳಿಕ ಆರೋಪಿ ಪ್ರಭಾಕರ ತಲವಾರನ್ನು ತೆಗೆದುಕೊಂಡು ಹೋಗುತ್ತಾ ನಿಮ್ಮನ್ನು ಕಡಿದು ಹೊಳೆಗೆ ಬಿಸಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾನೆ.
ನಾನು ಗಾಯಗೊಂಡು ಬಳಿಕ ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ಹೋಗಿ ಪ್ರಥಮ ಚಿಕಿತ್ಸೆ ಪಡೆದು ನಂತರ ಪುತ್ತೂರು ಸರಕಾರಿ ಆಸ್ಪತ್ರೆಗೆ ಬಂದು ದಾಖಲಾಗಿರುತ್ತೇನೆ ಎಂದು ಗಾಯಾಳು ಲಕ್ಷ್ಮಣ ಗೌಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.