ಪುತ್ತೂರು: ಬನ್ನೂರು ಗ್ರಾಮಸ್ಥರು ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ಬನ್ನೂರು ಗ್ರಾಮಾ ಪಂಚಾಯತ್ ಆಶ್ರಯದಲ್ಲಿ ಬನ್ನೂರಿನ ಬದಿಯಡ್ಕ ಸೇಡಿಯಾಪು ಕೆರೆದಂಡೆಯಲ್ಲಿ ನಡೆದ ನಮ್ಮೂರ ನಮ್ಮ ಕೆರೆ ಎಂಬ ಯೋಜನೆಯಡಿಯಲ್ಲಿ ಕೆರೆಯ ಹೂಳೆತ್ತುವ ಬಗ್ಗೆ ಪೂರ್ವಭಾವಿ ಸಭೆಯು ಸೇಡಿಯಾಪು ಜನಾರ್ಧನ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸೇಡಿಯಾಪು ಜನಾರ್ಧನ ಭಟ್, ಮದಕ ಎಂಬುದು ಸಾಂಪ್ರದಾಯಿಕ ನೀರು ಸಂಗ್ರಹಣಾ ಕೇಂದ್ರವಾಗಿದ್ದು ಹಿಂದೆ ಜಲರಾಶಿಯಿಂದ ತುಂಬಿ ತುಳುಕುತ್ತಿದ್ದ ಕೆರೆಗಳು ಇಂದು ತುಂಬಾ ಅಪರೂಪವಾಗಿ ಬಿಟ್ಟಿವೆ. ಇದರ ಪರಿಣಾಮವಾಗಿ ಆಸುಪಾಸಿನ ಭೌಗೋಳಿಕ ಪರಿಸರದಲ್ಲಿ ಜಲಕ್ಷಾಮ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲಿದೆ. ಈ ನಿಟ್ಟಿನಲ್ಲಿ ಊರಿನ ಜನರೆಲ್ಲ ಜಾಗೃತಿಗೊಂಡು ಕೆರೆ, ಇಂಗುಗುಂಡಿ, ಮದಕಗಳಂತಹ ಮೇಲ್ಪದರಗಳ ರಚನೆಗಳನ್ನು ಪುನರುಜ್ಜೀವನ ಗೊಳಿಸಬೇಕು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿದೇರ್ಶಕರಾದ ಪ್ರವೀಣರವರು ಮಾತನಾಡಿ ಹೂಳೆತ್ತುವ ಕಾರ್ಯದಿಂದ ಆಗುವಂತಹ ಪರಿಣಾಮ, ಪ್ರಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ.ಎಂ. ಕೃಷ್ಣಭಟ್ ಮಾತನಾಡಿ ಮಳೆ ಬೀಳುವ ಪ್ರಮಾಣ ಹಗೂ ನೀರು ಇಂಗುವ ಪ್ರಮಾಣದ ಬಗ್ಗೆ ಮಾಹಿತಿ ನೀಡಿ ನೀರು ಇಂಗಿಸುವುದರಿಂದ ಪ್ರಕೃತಿಗೆ ಆಗುವ ಪ್ರಯೋಜನದ ಕುರಿತು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಎಲ್ಲರೂ ಒಂದೇ ಮನಸ್ಸಿನಿಂದ ಭಾಗಿಯಾಗಿ ಕಾರ್ಯವನ್ನು ಯಶಸ್ವಿಗೊಳಿಸುವಲ್ಲಿ ಸಹಕಾರ ನೀಡಬೇಕೇಂದು ಇಂಗಿತವನ್ನು ವ್ಯಕ್ತಪಡಿಸಿದರು.
ಬಳಿಕ ಕೆರೆ ಅಭಿವೃದ್ಧಿ ಸಮಿತಿ ರಚಿಸಲಾಯಿತು. ಸೇಡಿಯಾಪು ಜನಾರ್ಧನ ಭಟ್ ರವರನ್ನು ಅವಿರೋಧವಾಗಿ ಈ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆರೆ ವಿಭಾಗದ ಇಂಜಿನಿಯರ್ ಭರತ್ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ನ ಅಧ್ಯಕ್ಷ ಆನಂದ, ಬನ್ನೂರು ಗ್ರಾಮ ಕರಣಿಕರಾದ ಶರಣ್ಯ , ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ, ಸಂಚಾಲಕ ಸಂತೋಷ್ ಬಿ, ಸದಸ್ಯ ಸಚಿನ್ ಶೆಣೈ, ವಿವೇಕಾನಂದ ವಿದ್ಯಾವರ್ಧಕ ಸಂಘದ ಸಾರ್ವಜನಿಕ ಸಂಪರ್ಕಧಿಕಾರಿ ವೆಂಕಟೇಶ್ , ಗ್ರಾಮಾ ವಿಕಾಸ ಯೋಜನೆಯ ಉಸ್ತುವಾರಿ ಗೋವಿಂದರಾಜ್ ನಾಯಕ್ ,ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ, ಗ್ರಾಮಾವಿಕಾಸ ಯೋಜನೆಯ ಸಂಯೋಜಕ ಜಯಗೋವಿಂದ ಶರ್ಮಾ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷ ರತ್ನಾಕರ ಪ್ರಭು ಕಂಜೂರು ಉಪಸ್ಥಿತರಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ತಾಲೂಕಿನ ಕೃಷಿ ಅಧಿಕಾರಿ ಉಮೇಶ್ ಕಾರ್ಯಕ್ರಮವನ್ನು ಸ್ವಾಗತಿಸಿ ನಿರೂಪಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರಾಮಪ್ರಸಾದ್ ಮಯ್ಯ, ಪಂಚಾಯತ್ ಸದಸ್ಯ ಶಿನಪ್ಪ ಕುಲಾಲ್, ಸುಪ್ರೀತಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾನಿರತೆ ಕಮಲಾ, ಗಂಗಾಧರ್ ಕುಲಾಲ್, ಉಗ್ರಪ್ಪ ಕುಲಾಲ್ ಹಾಗೂ ಗಣ್ಯರು ಉಪಸ್ಥಿತರಿದ್ದರು.