ಮಂಗಳೂರು: ಉಡುಪಿ- ಮಂಗಳೂರು ಭೇಟಿಯಲ್ಲಿದ್ದ ರಾಜ್ಯ ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮಕ್ಕಳ ಅಭಿವೃದ್ಧಿ , ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಈ ಸಂದರ್ಭ ಶ್ರೀ ಗಳು, ದಕ ಜಿಲ್ಲೆಯ ಪ್ರಾಚೀನ ತೀರ್ಥ ಕ್ಷೇತ್ರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಆಸುಪಾಸಿನಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಕ್ಷೇತ್ರದ ಪಾವಿತ್ರ್ಯಕ್ಕೆ ಅಪಾಯ ಎದುರಾಗುವ ಸಾಧ್ಯತೆಗಳನ್ನು ವಿವರಿಸಿ ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಅಲ್ಲಿ ಗಣಿಗಾರಿಕೆ ನಿಲ್ಲಿಸಿ ಸಂರಕ್ಷಿತ ಪ್ರದೇಶವೆಂದು ಘೋಷಿಸುವಂತೆ ಸಚಿವರಿಗೆ ಲಿಖಿತ ಅಪೇಕ್ಷೆ ಸಲ್ಲಿಸಿದರು.
ಸ್ಪಂದಿಸಿದ ಸಚಿವ ಹಾಲಪ್ಪ ಆಚಾರ್ ಕೂಡಲೇ ಈ ವಿಚಾರ ಮಂಗಳೂರು ಜಿಲ್ಲಾಧಿಕಾರಿ ಹಾಗೂ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ಕ್ರಮಕೈಗೊಳ್ಳಲು ಸೂಚಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮುಖ್ಯ ಕಾರ್ಯದರ್ಶಿ ಡಾ. ಪಂಕಜ್ ಕುಮಾರ್ ಪಾಂಡೆ , ನಿರ್ದೇಶಕ ರಾಮ್ ಮನೋಹರ್ ಪ್ರಸಾದ್ , ಸಚಿವರ ಆಪ್ತ ಕಾರ್ಯದರ್ಶಿ ಡಾ. ನಂದನ್ ಕುಮಾರ್ ಉಪಸ್ಥಿತರಿದ್ದರು.