ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸಿತಾರಾಮನ್ ಕೇಂದ್ರ ಬಜೆಟ್ 2022 (Union Budget 2022) ಮಂಡಿಸಿದ್ದು, ದೇಶಾದ್ಯಂತ 60 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದು ಸರ್ಕಾರದ ಮುಂದಿನ ಗುರಿಯಾಗಿದೆ ಎಂದು ಹೇಳಿದರು. ಪಿಎಂ ಗತಿ ಶಕ್ತಿಯು ಆರ್ಥಿಕತೆಯನ್ನು ಮುಂದಕ್ಕೆ ಕರೆದೊಯ್ಯುತ್ತದೆ ಮತ್ತು ಯುವಕರಿಗೆ ಹೆಚ್ಚಿನ ಉದ್ಯೋಗಗಳು ಮತ್ತು ಅವಕಾಶಗಳನ್ನು ನೀಡುತ್ತದೆ. ಪಿಎಂ ಗತಿ ಶಕ್ತಿ ಯೋಜನೆಯಡಿ ಟರ್ಮಿನಲ್ ನಿರ್ಮಾಣ ಮಾಡಲಾಗುವುದು. ಮೇಕ್ ಇನ್ ಇಂಡಿಯಾ ಮೂಲಕ 60 ಲಕ್ಷ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಭಾರತದಲ್ಲಿ ಯುವಕರು, ಮಹಿಳೆಯರು ಮತ್ತು ಬಡವರ ಸಬಲೀಕರಣಕ್ಕೆ ಸರ್ಕಾರ ಒತ್ತು ನೀಡಿದೆ. ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಯು ಆತ್ಮನಿರ್ಭರ ಭಾರತವನ್ನು ಯಶಸ್ವಿಯಾಗಿಸಲಿದೆ. ಮುಂದಿನ ಐದು ವರ್ಷಗಳಲ್ಲಿ 60 ಲಕ್ಷ ಹೊಸ ಉದ್ಯೋಗಗಳು ಮತ್ತು 30 ಲಕ್ಷ ಕೋಟಿ ಹೆಚ್ಚುವರಿ ಉತ್ಪಾದನೆಯನ್ನು ರಚಿಸುವ ಸಾಮರ್ಥ್ಯ ಭಾರತಕ್ಕಿದೆ ಎಂದು ನಿರ್ಮಲಾ ಸೀತಾರಾಮನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು 4ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. 2022-23ರ ಈ ಬಜೆಟ್‌ನಲ್ಲಿ 4 ಕ್ಷೇತ್ರಗಳ ಆಧಾರದಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ. ಕೇಂದ್ರದ ಈ ಬಜೆಟ್‌ನಲ್ಲಿ 4 ಹಂತಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಘೋಷಿಸಲಾಗಿದೆ. ಪಿಎಂ ಗತಿ ಶಕ್ತಿ ಮಿಷನ್, ಸರ್ವರ ಪಾಲ್ಗೊಳ್ಳುವಿಕೆಯಲ್ಲಿ ಅಭಿವೃದ್ಧಿ, ಉತ್ಪಾದನಾ ಕ್ಷೇತ್ರಕ್ಕೆ ಉತ್ತೇಜನ, ಬಂಡವಾಳ ಹಿಂತೆಗತಕ್ಕೆ ಆದ್ಯತೆ ಈ 4 ಹಂತಗಳಲ್ಲಿ ಅಭಿವೃದ್ಧಿ ಯೋಜನೆಗೆ ಈ ಬಜೆಟ್‌ನಲ್ಲಿ ಪ್ರಾಧಾನ್ಯತೆ ನೀಡಲಾಗಿದೆ.
ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಆಧುನಿಕ ಮೂಲಸೌಕರ್ಯಕ್ಕೆ ಒತ್ತು ನೀಡಲಾಗಿದೆ. ಪಿಎಂ ಗತಿ ಶಕ್ತಿ ಮೂಲಕ ಅಭಿವೃದ್ಧಿಗೆ ದಿಟ್ಟ ಕ್ರಮ ವಹಿಸಲಾಗಿದೆ. 25 ಸಾವಿರ ಕಿ.ಮೀ ಹೆದ್ದಾರಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. 3 ವರ್ಷದಲ್ಲಿ 100 ಕಾರ್ಗೋ ಟರ್ಮಿನಲ್ ನಿರ್ಮಾಣ ಮಾಡಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಗ್ರಾಮ ಸೌಕರ್ಯ ಅಭಿವೃದ್ಧಿಗೆ ಕೇಂದ್ರದಿಂದ ವಿಶೇಷ ಅನುದಾನ ಘೋಷಿಸಲಾಗಿದೆ. ಗಡಿಪ್ರದೇಶಗಳ ಗ್ರಾಮಗಳ ಮೂಲಸೌಕರ್ಯಕ್ಕೆ ಆರ್ಥಿಕ ನೆರವು ನೀಡಲಾಗುವುದು. ಎಲ್ಲಾ ಪೋಸ್ಟ್ ಆಫಿಸ್‌ಗಳಲ್ಲೂ ಬ್ಯಾಂಕಿಂಗ್ ವ್ಯವಸ್ಥೆಗೆ ಯೋಜನೆ ರೂಪಿಸಲಾಗುವುದು. 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕ್‌ಗಳನ್ನು ಸ್ಥಾಪನೆಗೆ ನಿರ್ಧಾರ ಮಾಡಲಾಗಿದೆ. ಹೈಡ್ರೋ ಸೋಲಾರ್ ಪ್ರಾಜೆಕ್ಟ್‌ಗೆ 1400 ಕೋಟಿ ಹಂಚಿಕೆ ಮಾಡಲಾಗುವುದು. 112 ಆಕಾಂಕ್ಷೆಯ ಜಿಲ್ಲೆಗಳಲ್ಲಿ ಶೇಕಡಾ 95ರಷ್ಟು ಪ್ರಗತಿಯಾಗಲಿದೆ. 1.5 ಲಕ್ಷ ಅಂಚೆ ಕಚೇರಿಗಳು ಕೋರ್ ಬ್ಯಾಂಕ್ ಆಗಿ ಅಭಿವೃದ್ಧಿ ಮಾಡಲಾಗುವುದು. ಅಂಚೆ ಕಚೇರಿಗಳನ್ನು ಕೋರ್ ಬ್ಯಾಂಕ್‌ಗಳಾಗಿ ಪರಿವರ್ತನೆ ಮಾಡಲಾಗುವುದು. 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕ್ ನಿರ್ಮಿಸಲಾಗುವುದು. 1483 ಕೇಂದ್ರದ ಅನವಶ್ಯಕ ಕಾನೂನು ರದ್ದು ಮಾಡಲಾಗುವುದು. ಗಡಿ ಗ್ರಾಮಗಳಿಗೆ ಸಂಪರ್ಕ ನೀಡಿಕೆಗೆ ಒತ್ತು ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ದೇಶದಲ್ಲಿ 5G ಸೇವೆ ಆರಂಭ:
2022-23ರ ವೇಳೆಗೆ 5G ಮೊಬೈಲ್ ಸೇವೆಗಳನ್ನು ಒದಗಿಸಲು ಕ್ರಮವಹಿಸಲಾಗುವುದು ಎಂದು ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.5G ತಂತ್ರಜ್ಞಾನ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಿದೆ. 5ಜಿ ಬಿಡುಗಡೆಗಾಗಿ 2022ರಲ್ಲಿ ಸ್ಪೆಕ್ಟ್ರಮ್ ಹರಾಜು ನಡೆಸಲಾಗುವುದು ಎಂದು ಹಣಕಾಸು ಸಚಿವರು ಮಾಹಿತಿ ನೀಡಿದ್ದಾರೆ. ಅಲ್ಲದೇ, ಮುಂದಿನ ಮೂರು ವರ್ಷಗಳಲ್ಲಿ ಹೊಸ ತಲೆಮಾರಿನ 400 ವಂದೇ ಭಾರತ್ ರೈಲುಗಳನ್ನು ತರಲಾಗುವುದು ಎಂದು ತಿಳಿಸಿದ್ದಾರೆ.
ಕಾವೇರಿ ಸೇರಿ 5 ನದಿಗಳ ಜೋಡಣೆ:
ಕಾವೇರಿ ಸೇರಿ 5 ನದಿಗಳ ಜೋಡಣೆಗೆ ಯೋಜನೆ ಮಾಡಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ ಎಂದು ಕೇಂದ್ರ ಬಜೆಟ್‍ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ ಕೃಷ್ಣ, ಗೋದಾವರಿ, ಕಾವೇರಿ, ಪೆನ್ನಾರ್, ನರ್ಮದಾ ಐದು ನದಿಗಳ ನದಿ ಜೋಡಣೆ ಯೋಜನೆಗಳಿಗೆ ಒತ್ತು ನೀಡಲಾಗುವುದು. ಕೆನ್ ಬೆಟ್ಟಾ ನದಿ ಜೋಡಣೆ ಯೋಜನೆಗೆ 44,000 ಕೋಟಿ ರೂಪಾಯಿ ನೀಡಲಾಗಿದೆ. ರಾಷ್ಟ್ರೀಯ ಯೋಜನೆಯಡಿ 5 ನದಿಗಳನ್ನು ಜೋಡಿಸುವ ಯೋಜನೆಗಳು ಮತ್ತು ಡಿಪಿಆರ್‌ಗಳನ್ನು ಮಾಡಲಾಗಿದೆ. ಗಂಗಾ ನದಿ ಕಾರಿಡಾರ್‌ನಲ್ಲಿ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕೆನ್ -ಬೆಟ್ಟಾ ಲಿಂಕ್ ಯೋಜನೆ ದೇಶದಲ್ಲಿ ಕೈಗೊಂಡಿರುವ ನದಿಗಳ ಜೋಡಣೆಯ ಮೊದಲ ಯೋಜನೆಯಾಗಿದೆ. ಯಮುನಾದ 2 ಉಪನದಿಗಳಾದ ಬೆಟ್ಟಾ ನದಿಗೆ ಜೋಡೆಣೆ ಮಾಡಲಾಗುತ್ತದೆ. ಈ ಯೋಜನೆಯಿಂದ 9.0 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಪ್ರಯೋಜನಗಳು, 62 ಲಕ್ಷ ಜನರಿಗೆ ಕುಡಿಯುವ ನೀರು, 103 ಮೆಗಾವ್ಯಾಟ್ ಜಲವಿದ್ಯುತ್, 27 MW ಸೌರ ವಿದ್ಯುತ್ ಉತ್ಪಾದನೆಯಾಗಲಿದೆ. ವಾಜಪೇಯಿ ಸರ್ಕಾರದಿಂದ ಸುಮಾರು 20 ವರ್ಷಗಳ ನಂತರ ಮೊದಲ ಕೆನ್ ಬೆಟ್ಟಾ ನದಿ ಜೋಡನೇ ಯೋಜನೆಗೆ ಹಂಚಿಕೆಯೊಂದಿಗೆ ಇದು ಅತ್ಯಂತ ಮಹತ್ವದ ಘೋಷಣೆಯಾಗಿದೆ.
ಆರ್‌ಬಿಐನಿಂದಲೇ ಡಿಜಿಟಲ್ ಕರೆನ್ಸಿ – ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್:
ಆರ್‌ಬಿಐನಿಂದ ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದಲೇ ಡಿಸಿಟಲ್ ಕರೆನ್ಸಿ ಬಿಡುಗಡೆಯಾಗಲಿದ್ದು, ಇದೇ ವರ್ಷದಲ್ಲಿ ಡಿಜಿಟಲ್ ಕರೆನ್ಸಿಗೆ ಚಾಲನೆ ಸಿಗಲಿದೆ ಎಂದು ತಿಳಿಸಿದರು.ಇನ್ನು 2022-23ರಲ್ಲಿ ಬ್ಲಾಕ್ ಚೈನ್ ತಂತ್ರಜ್ಞಾನ ಬಳಸಿ ಡಿಜಿಟಲ್ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಡಿಜಿಟಲ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಇದೊಂದು ದೊಡ್ಡ ನಿರ್ಧಾರವಾಗಿದ್ದು ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರಿಯ ಗುಣಮಟ್ಟದ ಶಿಕ್ಷಣ ನೀಡಲು ಈ ಯೋಜನೆ ತರಲಾಗಿದೆ. ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಈ ಯೋಜನೆಯಲ್ಲಿ ಕೈಜೋಡಿಸಲಿದೆ ಎಂದು ಅವರು ಮಾಹಿತಿ ನೀಡಿದರು. ಒಂದನೇ ತರಗತಿಯಿಂದ 12ನೇ ತರಗತಿಯವರೆಗೆ ಪಠ್ಯ ಬೋಧಿಸಲು 200 ಪ್ರಾದೇಶಿಕ ಟಿವಿ ಚಾನೆಲ್‌ಗಳನ್ನು ತೆರೆಯಲಾಗುತ್ತದೆ ಎಂದರು.
- ಚಿನ್ನ, ವಜ್ರಾಭರಣಗಳು ಅಗ್ಗ
- ಕೃಷಿ ಉಪಕರಣ, ವಿದೇಶಿ ಉತ್ಪನ್ನಗಳ ಬೆಲೆ ಇಳಿಕೆ
- ಚಿನ್ನ, ವಜ್ರಾಭರಣಗಳ ಮೇಲಿನ ತೆರಿಗೆ ಇಳಿಕೆ
- ಮೊಬೈಲ್, ಮೊಬೈಲ್ ಚಾರ್ಜರ್ಗಳ ಬೆಲೆ ಇಳಿಕೆ
- ಬಟ್ಟೆ, ಚರ್ಮದ ಉತ್ಪನ್ನಗಳ ಬೆಲೆ ಇಳಿಕೆ
- ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆಯಿಲ್ಲ
- ಬಟ್ಟೆ, ಚರ್ಮದ ಉತ್ಪನ್ನಗಳ ಬೆಲೆ ಇಳಿಕೆ
- ಒಂದು ಮಾರುಕಟ್ಟೆ, ಒಂದು ತೆರಿಗೆ ಯೋಜನೆ ಜಾರಿ
- ಕೊರೋನಾ ನಡುವೆಯೂ GST ಆದಾಯ ಉತ್ತಮ
- ಜನವರಿ 2022ರಲ್ಲಿ ಅತೀ ಹೆಚ್ಚು ಜಿಎಸ್ಟಿ ಸಂಗ್ರಹ
- 1 ಲಕ್ಷ 40 ಸಾವಿರ ಕೋಟಿ ಜಿಎಸ್ಟಿ ಸಂಗ್ರಹ
- ಕೇಂದ್ರ ಮತ್ತು ರಾಜ್ಯ ನೌಕರರಿಗೆ TDS 10ರಿಂದ 14ಕ್ಕೆ ಏರಿಕೆ
- ಸ್ಟಾರ್ಟ್ಅಪ್ಗಳಿಗೆ ಮತ್ತೊಂದು ವರ್ಷ ತೆರಿಗೆ ವಿನಾಯಿತಿ
- ಡಿಜಿಟಲ್ ಆಸ್ತಿ ಮೇಲೆ ಶೇ.30 ರಷ್ಟು ತೆರಿಗೆ
- ಡಿಜಿಟಲ್ ಆಸ್ತಿ ವರ್ಗಾವಣೆ ಮೇಲೆ ಶೇ.30ರಷ್ಟು ತೆರಿಗೆ
- ವರ್ಚ್ಯುಯಲ್ ಅಸೆಟ್ ಮೇಲೆ ಶೇ.1ರಷ್ಟು TDS
- ತೆರಿಗೆ ರಿಟರ್ನ್ಸ್ಗೆ ಹೊಸ ನೀತಿ
- ತೆರಿಗೆ ಪಾವತಿಯಲ್ಲಾದ ತಪ್ಪುಗಳನ್ನು ಸರಿಪಡಿಸಲು 2 ವರ್ಷ ಅವಕಾಶ ನೀಡಿದ ಕೇಂದ್ರ
- ಐಟಿ ರಿಟರ್ನ್ಸ್ ವೇಳೆ ಆಗಿದ್ದ ತಪ್ಪುಗಳನ್ನು ಸರಿಪಡಿಸಲು ಅವಕಾಶ