ಸವಣೂರು: ಸರಕಾರಿ ಶಾಲೆಯ ಕೊಠಡಿಯೊಂದರಲ್ಲಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ನಮಾಝ್ ಮಾಡಲು ಅವಕಾಶ ನೀಡಿರುವ ಘಟನೆ ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಅಂಕತ್ತಡ್ಕದಲ್ಲಿ ನಡೆದಿದ್ದು, ಈ ಘಟನೆಯನ್ನು ಹಿಂದೂ ಜಾಗರಣಾ ವೇದಿಕೆ ಪುತ್ತೂರು ಜಿಲ್ಲೆ ತೀವ್ರವಾಗಿ ಖಂಡಿಸಿದೆ.
ಈ ಬಗ್ಗೆ ಶಿಕ್ಷಣಾಧಿಕಾರಿಗಳು ತನಿಖೆ ನಡೆಸಿ ಶೀಘ್ರ ಕ್ರಮ ಕೈಗೊಳ್ಳಬೇಕು, ಈ ಘಟನೆ ಮುಂದಿನ ವಾರವೂ ಮುಂದುವರೆದರೆ, ಹಿಂದೂ ಜಾಗರಣಾ ವೇದಿಕೆ ಸೋಮವಾರ ಹಾಗೂ ಶುಕ್ರವಾರ ಶಾಲೆಯಲ್ಲಿ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ. ಪದೇ ಪದೇ ಶಾಲೆಗಳಲ್ಲಿ ಈ ರೀತಿಯ ಘಟನೆಗಳು ಮುಂದುವರೆಯುತ್ತಿದ್ದು, ಶಿಕ್ಷಣಾಧಿಕಾರಿ ಶೀಘ್ರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ರೈ ಹೊಸಮನೆ ತಿಳಿಸಿದ್ದಾರೆ.
‘ಹಿಜಾಬ್’ ವಿವಾದದ ಘಟನೆಯಲ್ಲಿ ‘ಅಲ್ಲಾ ಹು ಅಕ್ಬರ್’ ಎಂದು ಘೋಷಣೆ ಕೂಗಿದ ಯುವತಿಗೆ ಮುಸ್ಲಿಂ ಸಂಘಟನೆಗಳು ಉಡುಗೊರೆಗಳನ್ನು ನೀಡುತ್ತಿದ್ದು, ಇದರ ಬಗ್ಗೆಯೂ ಶೀಘ್ರ ತನಿಖೆಯಾಗಬೇಕು. ಪದೇ ಪದೇ ಧರ್ಮ ಆಧರಿತ ವಿಚಾರಗಳನ್ನು ಶಾಲೆ ಕಾಲೇಜುಗಳಿಗೆ ತಂದು ಕೋಮು ಸಂಘರ್ಷ ಉಂಟುಮಾಡಲು ಪ್ರಯತ್ನ ನಡೆಯುತಿದ್ದು, ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.