ಮಂಗಳೂರು: ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರವು ಸದ್ಯ ಭಾರೀ ಸುದ್ದಿಯಲ್ಲಿದ್ದು ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿದೆ. ಸೈಬರ್ ಕಳ್ಳರು ಅದನ್ನೇ ಬಂಡವಾಳ ಮಾಡಿಕೊಂಡು ಸೈಬರ್ ದಾಳಿ ಮಾಡುತ್ತಿದ್ದಾರೆ.
ಚಿತ್ರದ ಫ್ರೀ ಡೌನ್ಲೋಡ್ ಲಿಂಕ್ ಸಾಮಾಜಿಕ ಜಾಲತಾಣ ಗಳಲ್ಲಿ ಹರಿದಾಡುತ್ತಿದ್ದು, ಇದನ್ನು ಕ್ಲಿಕ್ ಮಾಡಿದರೆ, ವೈರಸ್ ದಾಳಿಗೆ ಒಳಗಾಗುವ ಸಾಧ್ಯತೆ ಇದೆ ಎಂದು ಸೈಬರ್ ತಜ್ಞ ಡಾ. ಅನಂತ್ ಪ್ರಭು ಎಚ್ಚರಿಸಿದ್ದಾರೆ.
ಡೌನ್ಲೋಡ್ ಲಿಂಕ್ ಹೆಸರಲ್ಲಿ ಸೈಬರ್ ಹ್ಯಾಕರ್ಸ್ ವೈರಸ್ ಕಳುಹಿಸುತ್ತಿದ್ದು, ಅದರ ಮೂಲಕ ಆಂಡ್ರಾಯ್ಡ್ ಫೋನ್ ಅಥವಾ ಲ್ಯಾಪ್ಟಾಪ್ನಲ್ಲಿರುವ ಮಾಹಿತಿಗಳನ್ನು ಕದಿಯಬಹುದು.
ವೈರಸ್ ಮೂಲಕ ಸ್ಮಾರ್ಟ್ ಫೋನ್ ಅನ್ನು ಹ್ಯಾಕ್ ಮಾಡುವ ಸೈಬರ್ ಕಳ್ಳರು, ಅರಿವಿಲ್ಲದಂತೆ ಮೊಬೈಲ್ ಜೊತೆಗೆ ಲಿಂಕ್ ಆಗಿರುವ ಬ್ಯಾಂಕ್ ಮಾಹಿತಿಗಳನ್ನು ಪಡೆಯುತ್ತಾರೆ.