ಕೋಲ್ಕತ್ತಾ: ಲ್ಯಾಂಡ್ ಆಗುತ್ತಿದ್ದ ಸ್ಪೈಸ್ ಜೆಟ್ ವಿಮಾನವು ಭಾರೀ ಬಿರುಗಾಳಿಗೆ ಸಿಲುಕಿದ್ದರಿಂದ ಕ್ಯಾಬಿನ್ ಲಗೇಜ್‌ಗಳು ಮೇಲೆ ಬಿದ್ದು ಕನಿಷ್ಠ 40 ಪ್ರಯಾಣಿಕರು ಗಾಯಗೊಂಡ ಘಟನೆಯು ಪಶ್ಚಿಮ ಬಂಗಾಳದ ದುರ್ಗಾಪುರದ ಕಾಜಿ ನಜ್ರುಲ್ ಇಸ್ಲಾಂ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಗಾಯಗೊಂಡ 40 ಮಂದಿ ಪ್ರಯಾಣಿಕರಲ್ಲಿ ಕನಿಷ್ಠ 10 ಮಂದಿಗೆ ಗಂಭೀರ ಗಾಯಗಳಾಗಿವೆ. ಉಳಿದವರು ಸಣ್ಣಪುಟ್ಟ ಗಾಯಗಳಾಗಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಹತ್ತು ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದೆ ಆದರೆ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನವು ಚಂಡಮಾರುತಕ್ಕೆ ಹೇಗೆ ಸಿಲುಕಿತು ಎಂಬುದನ್ನು ಖಚಿತ ಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ.
ವಿಮಾನವು ಆಂಡಾಲ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲು ಪ್ರಾರಂಭಿಸಿದಾಗ ವಿಮಾನವು ಅಲುಗಾಡಲು ಪ್ರಾರಂಭಿಸಿತು. ಭಾರಿ ಪ್ರಕ್ಷುಬ್ಧತೆಯ ಕಾರಣ ಕ್ಯಾಬಿನ್ ಸಾಮಾಗ್ರಿಗಳು ಪ್ರಯಾಣಿಕರ ಮೇಲೆ ಬಿದ್ದವು. ಓರ್ವ ಪ್ರಯಾಣಿಕ ತೀವ್ರವಾಗಿ ಗಾಯಗೊಂಡಿದ್ದು, ಬೆನ್ನುಮೂಳೆಯ ಶಸ್ತ್ರಚಿಕಿತ್ಸಕರಿಗೆ ಉಲ್ಲೇಖಿಸಲಾಗಿದೆ ಎಂದು ಆಂಡಾಲ್ ಆಸ್ಪತ್ರೆಯ ಡಾ.ತಪನ್ ಕುಮಾರ್ ರೇ ಹೇಳಿದ್ದಾರೆ.