ಕಾರವಾರ: ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿಎಸ್) ಎರಡು ಫಾಸ್ಟ್ ಪಟ್ರೋಲ್ ಹಡಗುಗಳನ್ನು ಕಾರವಾರ ವಿಭಾಗಗಕ್ಕೆ ನಿಯೋಜಿಸುವ ಮೂಲಕ ಕರಾವಳಿಯಲ್ಲಿ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಂಡಿದೆ. ಎರಡು ಫಾಸ್ಟ್ ಪಟ್ರೋಲ್ ಹಡಗುಗಳು ಗಂಟೆಗೆ 35 ನಾಟ್ಸ್ ವೇಗವನ್ನು ಕ್ರಮಿಸಬಲ್ಲ ಸಾಮರ್ಥ್ಯ ಹೊಂದಿದ್ದು, 30 ಎಂಎಂ ಸಿಆರ್ ಎನ್ ಗನ್ ಇದು ಹೊಂದಿದೆ. ಇವುಗಳನ್ನು ಉಪಗ್ರಹ ಸಂವಹನ ಮತ್ತು ಸಂಚರಣೆ ವ್ಯವಸ್ಥೆಗಳೊಂದಿಗೆ ಅಳವಡಿಸಲಾಗಿದೆ. ಹಡಗುಗಳನ್ನು ಕಣ್ಗಾವಲು, ಗಸ್ತು ತಿರುಗಲು ವಿನ್ಯಾಸಗೊಳಿಸಲಾಗಿದೆ.
ಮಾತ್ರವಲ್ಲದೆ ಹೆಚ್ಚು ಆಳವಿಲ್ಲದ ನೀರಿನ ಕಾರ್ಯಾಚರಣೆಗೂ ಇವು ಸಮರ್ಥವಾಗಿದೆ. ಎರಡೂ ಎಫ್ಪಿವಿಗಳು ಕಳ್ಳಸಾಗಣೆ ವಿರೋಧಿ ಕಾರ್ಯಾಚರಣೆ, ಕಡಲ್ಗಳ್ಳತನ ವಿರೋಧಿ ಗಸ್ತು, ಮೀನುಗಾರಿಕೆ ರಕ್ಷಣೆ ಮತ್ತು ಶೋಧ ಕಾರ್ಯಾಚರಣೆಗಳಿಗೆ ಇವುಗಳನ್ನು ಬಳಕೆ ಮಾಡಬಹುದಾಗಿದೆ.
ಈ ಹಿಂದೆಯೂ ಎರಡೂ ಹಡಗುಗಳು ಹಲವಾರು ಎಸ್ಎಆರ್ ಕಾರ್ಯಾಚರಣೆಗಳು, ಕಡಲ್ಗಳ್ಳತನ ವಿರೋಧಿ ಗಸ್ತು ಮತ್ತು ಕಣ್ಗಾವಲು ಪ್ರಯತ್ನಗಳಲ್ಲಿ ಭಾಗಿಯಾಗಿವೆ. ಮಾತ್ರವಲ್ಲದೆ ಮೀನುಗಾರರಿಗೆ ಇವುಗಳ ಮೂಲಕ ನೆರವು ನೀಡಲಾಗಿದೆ. ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿಎಸ್) ಕಾರವಾರ ಘಟಕವು ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಮಾಜಾಳಿಯಿಂದ ದಕ್ಷಿಣದ ಭಟ್ಕಳದವರೆಗೆ ತನ್ನ ವ್ಯಾಪ್ತಿ ಹೊಂದಿದೆ. ಕಾರವಾರದಲ್ಲಿ ಐಸಿಜಿಎಸ್ 2009ರ ನವೆಂಬರ್ 4 ರಿಂದ ಕಾರ್ಯಾರಂಭ ಮಾಡಿದಾಗಿನಿಂದ 2 ಇಂಟರ್ ಸೆಪ್ಟರ್ ಬೋಟ್ಗಳು ಮತ್ತು 2 ಇಂಟರ್ ಸೆಪ್ಟರ್ ಕ್ರಾಫ್ಟ್ಗಳೊಂದಿಗೆ ಕಾರ್ಯನಿರ್ವಹಿಸುತ್ತಿತ್ತು.