75 ವಸಂತಗಳ ಸಂಭ್ರಮದಲ್ಲಿರುವ ಭಾರತದಲ್ಲಿ ಮನೆ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಿ ಸಂಭ್ರಮಿಸಲಾಗುತ್ತಿದೆ. ಹರ್ ಘರ್ ತಿರಂಗ ಅಭಿಯಾನದಡಿ ದೇಶದ ಸುಮಾರು 20 ಕೋಟಿ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲಾಗಿದೆ.
ಆ.13ರ ಬೆಳಗ್ಗೆ ಆರಂಭವಾದ ಹರ್ ಘರ್ ತಿರಂಗ ಅಭಿಯಾನದಂತೆ ಇಂದು (ಆ.15) ಸಂಜೆ ಮನೆಗಳಲ್ಲಿ ಹಾರಿಸಿದ ಧ್ವಜವನ್ನು ಇಳಿಸಬೇಕಿದೆ. ಆದರೆ ರಾಷ್ಟ್ರಧ್ವಜದ ಗೌರವಕ್ಕೆ ಚ್ಯುತಿ ಬಾರದಂತೆ ಹಲವು ಅಂಶಗಳನ್ನು ಗಮನಿಸಬೇಕಿದೆ.
ಧ್ವಜ ಮಡಚುವುದು ಹೇಗೆ..!!??
ಧ್ವಜವನ್ನು ಸ್ವಚ್ಛ, ಸಮತಟ್ಟಾದ ಸ್ಥಳದಲ್ಲಿ ಇಟ್ಟುಕೊಳ್ಳಿ. ಮೊದಲಿಗೆ ಕೇಸರಿ ಮತ್ತು ಹಸಿರು ಬಣ್ಣದ ಬಟ್ಟೆಯನ್ನು ಬಿಳಿ ಬಣ್ಣದ ಬಟ್ಟೆಯ ಕೆಳಗೆ ಮಡಚಿ. ಆಯತಾ ಕಾರಾದಲ್ಲಿರುವ ಬಿಳಿ ಬಣ್ಣದ ಬಟ್ಟೆಯಲ್ಲಿ ಕೇವಲ ಅಶೋಕ ಚಕ್ರ ಕಾಣುವಂತೆ ಇನ್ನೆರೆಡು ತುದಿಗಳನ್ನು ಮಡಚಿ.
ಎಲ್ಲೆಂದರಲ್ಲಿ ಎಸೆಯಬೇಡಿ
ಹಾರಿಸಿದಷ್ಟೇ ಗೌರವಯುತವಾಗಿ ಅದನ್ನು ಸಂರಕ್ಷಿಸುವುದೂ ಮುಖ್ಯ. ಮಡಚಿರುವ ಧ್ವಜವನ್ನು ಒಂದೇ ಕೈನಲ್ಲಿ ಹೇಗಾದರೂ ಹಾಗೆ ಹಿಡಿದುಕೊಳ್ಳುವಂತಿಲ್ಲ. ಗೌರವಪೂರ್ವಕವಾಗಿ ಧ್ವಜವನ್ನು ಎರಡೂ ಅಂಗೈಗಳ ಮೇಲೆ ಇಟ್ಟುಕೊಳ್ಳಬೇಕು. ಅದನ್ನು ನಿಮ್ಮ ಮನೆಯ ಭದ್ರ ಸ್ಥಳದಲ್ಲಿ ಇಡಬೇಕು. ಧ್ವಜದ ಗೌರವಕ್ಕೆ ಧಕ್ಕೆಯಾಗುವಂತಹ ಸ್ಥಳದಲ್ಲಿ ಅದನ್ನು ಇರಿಸುವಂತಿಲ್ಲ. ಇಷ್ಟ ಬಂದಾಗಲೆಲ್ಲಅದನ್ನು ಹೊರತೆಗೆದು ಬಳಕೆ ಮಾಡುವಂತೆಯೂ ಇಲ್ಲ.
ಶಿಕ್ಷೆಯಿದೆ..:
ತ್ರಿವರ್ಣ ಧ್ವಜವನ್ನು ಅವಮಾನಿಸಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು. ಇದಕ್ಕಾಗಿ, ಪ್ರಿವೆನ್ಶನ್ ಆಫ್ ಇನ್ಸಲ್ಟ್ ಟು ನ್ಯಾಶನಲ್ ಪ್ರೈಡ್ ಆಕ್ಟ್ 1971 ರ ಸೆಕ್ಷನ್ 2 ರಲ್ಲಿ ನಿಬಂಧನೆಯನ್ನು ಮಾಡಲಾಗಿದೆ. ಇದರ ಅಡಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತ್ರಿವರ್ಣ ಧ್ವಜ ಮತ್ತು ಸಂವಿಧಾನವನ್ನು ಸುಡುವುದು, ಪುಡಿ ಮಾಡುವುದು, ಹರಿದು ಹಾಕುವುದು ಅಥವಾ ಹಾನಿ ಮಾಡುವುದು ಅಪರಾಧವಾಗುತ್ತದೆ.