ಮಂಗಳೂರು: ಕಾರು ಕಳವು ನಡೆದು 25 ವರ್ಷಗಳ ಅನಂತರ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಪಿರಿಯಾಪಟ್ಟಣದ ಆರೆನಹಳ್ಳಿ ನಿವಾಸಿ ಅಸ್ಲಾಂ ಆಲಿಯಾಸ್ ಅಸ್ಲಾಂ ಪಾಷಾ (65) ಬಂಧಿತ ಆರೋಪಿ.

ಈತ ಮಂಗಳೂರಿನಲ್ಲಿ 1997ರಲ್ಲಿ ನಡೆದಿದ್ದ ಕಳವು ಪ್ರಕರಣದ ಆರೋಪಿ.
1997ರ ನ. 11ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂಬಾಸಿಡರ್ ಕಾರು ಕಳವು ಪ್ರಕರಣ ದಾಖಲಾಗಿತ್ತು. ಆರೋಪಿಯ ಪತ್ತೆಯಾಗಿರಲಿಲ್ಲ. ಅನಂತರ ಮೈಸೂರಿನಲ್ಲಿ ನಡೆದ ಕಳವು ಪ್ರಕರಣಗಳಿಗೆ ಸಂಬಂಧಿಸಿ ಅಲ್ಲಿನ ಪೊಲೀಸರು ಅಸ್ಲಾಂನನ್ನು ಬಂಧಿಸಿದ್ದರು. ಆಗ ಮಂಗಳೂರಿನಲ್ಲಿ ಕಾರು ಕಳವು ಮಾಡಿರುವ ಪ್ರಕರಣವೂ ಬಯಲಾಗಿತ್ತು. ಆರೋಪಿ ಮೈಸೂರು ಜೈಲಿನಲ್ಲಿದ್ದ.
ಮಂಗಳೂರು ಪೊಲೀಸರು ಎರಡು ಬಾರಿ ಬಾಡಿ ವಾರೆಂಟ್ ಮೇಲೆ ಆರೋಪಿಯನ್ನು ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಮೈಸೂರು ಜೈಲಿನಲ್ಲಿಯೇ ಇದ್ದ. ಕೆಲವು ಸಮಯದ ಅನಂತರ ಮೈಸೂರಿನ ಪ್ರಕರಣಗಳಲ್ಲಿ ಬಿಡುಗಡೆಗೊಂಡಿದ್ದ. ಆದರೆ ಮಂಗಳೂರಿನ ಪ್ರಕರಣ ಬಾಕಿಯಾಗಿತ್ತು. 2015 ಮೇ 7ರಂದು ಎಲ್‌ಪಿಸಿ (ದೀರ್ಘಕಾಲ ಬಾಕಿ ಇರುವ ಪ್ರಕರಣ) ಪ್ರಕರಣವೆಂದು ಪರಿಗಣಿಸಲಾಗಿತ್ತು. ಪೊಲೀಸರು ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು.
ಕಳೆದ ಸೋಮವಾರ ಮಂಗಳೂರು ದಕ್ಷಿಣ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಪುಟ್ಟರಾಮ ಹಾಗೂ ಕಾನ್‌ಸ್ಟೆಬಲ್ ರವಿಕುಮಾರ್ ಅವರು ಪಿರಿಯಾಪಟ್ಟಣದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಪೊಲೀಸರಿಗೆ ಸುಳ್ಳು ವಿಳಾಸಗಳನ್ನೇ ನೀಡಿದ್ದ. ಪೀಣ್ಯ ಬೆಂಗಳೂರಿನ ನಿವಾಸಿಯೆಂದು ತೋರಿಸಿದ್ದ. ಈತನ ಕುಟುಂಬದ ಬಗ್ಗೆ ನೀಡಿದ ಮಾಹಿತಿಯೂ ಸುಳ್ಳಾಗಿತ್ತು. ಈತ ಪತ್ನಿ, ಅತ್ತೆ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದ.
ಅಸ್ಲಾಂ ಪಾಷ ಮಂಗಳೂರಿನ ಅತ್ತಾವರ ಬಾಬುಗುಡ್ಡೆ ಮತ್ತು ಎಮ್ಮೆಕೆರೆಯಲ್ಲಿ ಕಾರುಗಳನ್ನು ಕಳವು ಮಾಡಿದ್ದ. ಅಲ್ಲದೆ ಮೈಸೂರು, ಪಿರಿಯಾಪಟ್ಟಣ ಮೊದಲಾದೆಡೆ ಹಲವು ವಾಹನಗಳನ್ನು ಕಳವು ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
