ಒಂದಲ್ಲಾ ಒಂದು ಹೇಳಿಕೆಗಳನ್ನು ನೀಡಿ ವಿವಾದದ ಸುಳಿಯಲ್ಲಿ ಸಿಲುಕಿಕೊಳ್ಳುವ ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.
ತೀರ್ಥಹಳ್ಳಿಯ ಎಪಿಎಂಸಿ ಸಮೀಪ ನಡೆದ ರೈತ ಮೋರ್ಚಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಗೃಹಸಚಿವರು ಹತ್ತು ಹಲವು ವಿಚಾರಗಳನ್ನು ಪ್ರಸ್ತಾಪಿಸಿದ ಬಳಿಕ “ಇಲ್ಲಿ ನಾನು ನೋಡಿದೆ ನಿನ್ನೆಯಿಂದ ಎಂಥದೋ ಗುಳಿಗೆ, ಗುಳಿಗೆ ಅಂತ ಹಾಕಿದ್ದಾರೆ. ವಾಲ್ ಪೋಸ್ಟ್‌ನಲ್ಲಿ ನಿನ್ನೆ ರಾತ್ರಿ ಎಂಥದೋ ನಾಟಕ. ಬಹಳ ಅಪಾಯ. ಇವರು ಯಾವ ಗುಳಿಗೆ ಕೊಡ್ತಾರೆ ಅಂಥ ಗೊತ್ತಿಲ್ಲ. ಜಾಪಾಳ್ ಮಾತ್ರೆ ಗುಳಿಗೆ ಕೊಟ್ರು ಕೊಡಬಹುದು. ಏಕೆಂದರೆ ಇವರು ಹೊಸ ಹೊಸ ನಾಟಕಗಳನ್ನು ಶುರುಮಾಡಿದ್ದಾರೆ” ಎಂದು ಹೇಳಿದ್ದಾರೆ. ಈ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿದೆ.
ಕರಾವಳಿ ಭಾಗದಲ್ಲಿ ಗುಳಿಗ ದೈವಕ್ಕೆ ಬಹಳ ವಿಶೇಷ ಸ್ಥಾನಮಾನವಿದೆ. ವಿಜಯಕುಮಾರ್ ಕೋಡಿಯಾಲ್ ಬೈಲು ನಿರ್ದೇಶನದ ‘ಶಿವದೂತೆ ಗುಳಿಗೆ’ ಎಂಬ ತುಳು ನಾಟಕ ಬಹಳ ಪ್ರಸಿದ್ಧಿ ಪಡೆದಿದ್ದು, ಹಲವಾರು ಕಡೆಗಳಲ್ಲಿ ಪ್ರದರ್ಶನ ಕಾಣುತ್ತಿದೆ.
ಕರಾವಳಿ ಭಾಗದ ಆಚಾರ-ವಿಚಾರಗಳ ಬಗ್ಗೆ ತಿಳಿದಿದ್ದರೂ ಗೃಹಸಚಿವರು ಈ ರೀತಿಯಾಗಿ ಹೇಳಿಕೆ ನೀಡಿದ್ದು, ಈ ಬಗ್ಗೆ ಕರಾವಳಿ ಜನತೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ..