ವಿಟ್ಲ : ಸಂಸ್ಕೃತಿ, ವಿಚಾರಧಾರೆಗಳ ಮುಖಾಂತರ ಸಾಮಾಜಿಕ ಪರಿವರ್ತನೆ ಸಮಾಜದಲ್ಲಿ ಆಗಬೇಕಾಗಿದೆ ಅದು ನಡೆಯುತ್ತಿದೆ. ಸಂಸ್ಕೃತಿಗೆ ನೋವಾದಾಗ ಆ ಸಂದರ್ಭದಲ್ಲಿ ಅದನ್ನು ವಿರೋಧಿಸುವ ಮತ್ತು ಅದನ್ನು ಸರಿದಾರಿಗೆ ಕೊಂಡೊಯ್ಯುವ ಕೆಲಸ ಕಾರ್ಯಗಳನ್ನು ಅತ್ಯಂತ ಪ್ರಬುದ್ಧ ನಾಗರಿಕರಾದ ಯುವ ಸಮುದಾಯ ಮಾಡುತ್ತಿರುವುದು ಹೆಮ್ಮೆಯ ವಿಷಯ. ಈ ಮೂಲಕ ಮಾತೃಭೂಮಿ ಯುವ ವೇದಿಕೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಒಂದು ಸಣ್ಣ ತಂಡದಿಂದ ಆರಂಭಗೊಂಡ ಇವರ ಈ ಸಂಘಟನೆಯ ಕಾರ್ಯಕ್ಷೇತ್ರ ಬೆಳವಣಿಗೆ ಇಂದು ಇಡೀ ಜಿಲ್ಲೆಗೆ ಮಾದರಿಯಾಗಿದೆ. ಈ ರೀತಿಯಾಗಿ ಎಲ್ಲಾ ಭಾಗದ ಯುವಕರಲ್ಲಿ ಇಂತಹ ಮಾನಸಿಕತೆ ಬೆಳೆದಾಗ ವಿವೇಕಾನಂದರ ಕಲ್ಪನೆ ಸಾಕಾರಗೊಳ್ಳಲು ಸಾಧ್ಯ ಎಂದು ಪುತ್ತೂರಿನ ಸಾಮಾಜಿಕ ಮುಂದಾಳು ಹಾಗೂ ಮಾತೃಭೂಮಿ ಯುವ ವೇದಿಕೆಯ ಮಾರ್ಗದರ್ಶಕರಾದ ಅರುಣ್ ಕುಮಾರ್ ಪುತ್ತಿಲ ಅವರು ಹೇಳಿದರು.

ಅವರು ಮಾಣಿಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಾತೃಭೂಮಿ ಯುವ ವೇದಿಕೆ(ರಿ.) ಮಾಣಿಲ ಇದರ ಆಶ್ರಯದಲ್ಲಿ ನಡೆದ ಸನ್ಮಾನ ಹಾಗೂ ಪುಸ್ತಕ ವಿತರಣಾ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಒಳ್ಳೆಯ ವಿಚಾರಧಾರೆಗಳನ್ನು ಸಮಾಜಕ್ಕೆ ಕೊಡುವುದರ ಮುಖಾಂತರ ಜಗತ್ತಿಗೆ ಒಂದು ಶ್ರೇಷ್ಠವಾದ ಕೊಡುಗೆಗಳ ಅಡಿಯಲ್ಲಿ ಸಾಮಾಜಿಕ ಪರಿಕಲ್ಪನೆಯ ಜೊತೆಗೆ ನಮ್ಮ ಬದುಕು ಸಾಗಲಿ ಎನ್ನುವ ಆಶಯದ ಮೂಲಕ ಮಾತೃಭೂಮಿ ಯುವ ವೇದಿಕೆ ಮಾಡುವ ಕಾರ್ಯಗಳು ನಮ್ಮೆಲ್ಲರ ಕೆಲಸಗಳು, ನಮ್ಮ ಮನೆಯ ಕೆಲಸ ಕಾರ್ಯಗಳು ಎನ್ನುವ ನಿಟ್ಟಿನಲ್ಲಿ ಅವರ ಜೊತೆ ಸಾಗುವ ಶಕ್ತಿಯನ್ನು ಭಗವಂತ ಮತ್ತು ತಾಯಿ ಭಾರತ ಮಾತೆ ನೀಡಲಿ ಎಂದು ಆಶಿಸಿದರು. ಅಲ್ಲದೇ ಮುಂದಿನ ದಿನಗಳಲ್ಲಿ ನಾನು ಈ ಸಂಘಟನೆಗೆ ಸದಾ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಹೇಳಿದರು.

ಯುವ ವೇದಿಕೆಯ ಆರಂಭದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನೆನಪು ಬರುತ್ತದೆ. ಆದರೆ ಒಬ್ಬ ಪ್ರಾಮಾಣಿಕ ಕಾರ್ಯಕರ್ತನಾಗಿ ಈ ಭಾಗದ ಜನರ ನಾಡಿಮಿಡಿತವನ್ನು ಅರಿತುಕೊಂಡು ಸಾಮಾಜಿಕ ಪರಿಕಲ್ಪನೆಯ ಆಧಾರದಲ್ಲಿ ನಮ್ಮ ಬದುಕು ಈ ಸಮಾಜಕ್ಕೆ ಸಮರ್ಪಣೆಯಾಗಬೇಕು ಎನ್ನುವ ರೀತಿಯಲ್ಲಿ ಕೆಲಸ ಮಾಡುತ್ತಾನೆ ಅದು ದೊಡ್ಡದಾದ ಫಲವನ್ನು ಕೊಡುತ್ತದೆ ಎನ್ನುವುದು ಈ ಸಂಘಟನೆಯ ಮುಖಾಂತರ ಆಗಿರುವಂತಹ ಸಮಾಜಮುಖಿ ಕಾರ್ಯಗಳ ಮುಖಾಂತರ ಅರಿತಿದೆ ಎಂದು ಅವರು ಹೇಳಿದರು.
ಈ ದೇಶ ಸದೃಢವಾಗಿರಬೇಕು ಸನಾತನ ಧರ್ಮ ಉಳಿಬೇಕು ಒಳ್ಳೆಯ ಸಂಸ್ಕೃತಿಯನ್ನು ಮಕ್ಕಳಿಗೆ ಕೊಡುವ ಮುಖಾಂತರ ರಾಷ್ಟ್ರೀಯ ವಿಚಾರಧಾರೆಗಳನ್ನು ಮಕ್ಕಳ ಬದುಕಿನಲ್ಲಿ ಜೋಡಿಸುವ ಮುಖಾಂತರ ಒಳ್ಳೆಯ ಪ್ರಜೆಗಳಾಗಿ ರೂಪುಗೊಳಿಸಬೇಕು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡುವುದರ ಮುಖಾಂತರ ಅವರ ಬದುಕಿನಲ್ಲಿ ಹೊಸ ಚೈತನ್ಯವನ್ನು ಶ್ರೇಷ್ಠ ಕೆಲಸವನ್ನು ಮಾಡುವ ಮಹತ್ಕಾರ್ಯ ಮಾತೃಭೂಮಿ ಯುವ ವೇದಿಕೆಯಿಂದ ನಡೆದಿದೆ ಅವರು ಎಂದು ಹೇಳಿದರು.

ಮಕ್ಕಳ ಜೊತೆ ಬೆರೆಯುವುದು ಅತ್ಯಂತ ಖುಷಿಯ ವಿಚಾರ. ಮಕ್ಕಳು ನಮ್ಮ ಮಾತನ್ನು ಕೇಳುವುದಿಲ್ಲ ಆದರೆ ನಮ್ಮನ್ನು ಅನುಕರಿಸುತ್ತಾರೆ. ಮಕ್ಕಳಿಗೆ ಪತ್ರಿಕೆಯನ್ನು ಓದಲು ಪ್ರೇರೇಪಿಸಬೇಕು. ಪುಸ್ತಕ ಎನ್ನುವುದು ಒಳ್ಳೆಯ ಸ್ನೇಹಿತರಿದ್ದಂತೆ. ಹೀಗಾಗಿ ಮಕ್ಕಳಿಗೆ ಪುಸ್ತಕ ನೀಡುವುದರ ಮೂಲಕ ಉತ್ತಮ ಅವಕಾಶವನ್ನು ಮಾತೃಭೂಮಿ ಯುವ ವೇದಿಕೆ ಕಲ್ಪಿಸಿಕೊಟ್ಟಿದೆ. ಇದು ಅಭಿನಂದಾರ್ಹ ಕಾರ್ಯ ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಪ್ರಫುಲ್ಲಾ ಗಣೇಶ್ ಅವರು ಹೇಳಿದರು. ಪುಸ್ತಕ ಕೊಡುವುದು ಬಹುದೊಡ್ಡ ದಾನವಾಗಿದೆ. ಮುಂದಿನ ದಿನಗಳಲ್ಲಿ ಕೂಡ ಇತಂಹ ಮಹತ್ಕಾರ್ಯಗಳು ಮಾತೃಭೂಮಿ ಯುವ ವೇದಿಕೆಯಿಂದ ನಡೆಯಲಿ ಮತ್ತು ಸಮಾಜಮುಖಿ ಕಾರ್ಯದಲ್ಲಿ ಸಂಘಟನೆಯು ಇನ್ನಷ್ಟು ತೊಡಗಿಸಿಕೊಳ್ಳಲಿ ಎಂದು ಶುಭ ಹಾರೈಸಿದರು.
ಮಾತೃಭೂಮಿ ಯುವ ವೇದಿಕೆಯ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕೊಂಕೋಡು ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸುದೇಶ್ ಟಿ. ಅವರು ಸಂಘಟನೆಯ ದ್ಯೇಯೋದ್ದೇಶಗಳು ಹಾಗೂ ಸಾಮಾಜಿಕ ಸೇವಾ ಕಾರ್ಯಗಳನ್ನು ತಿಳಿಸಿದರು.
ಸಂದರ್ಭದಲ್ಲಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕವನ್ನು ಗಳಿಸಿ ಸಾಧನೆ ಮಾಡಿದ ಸರಕಾರಿ ಪ್ರೌಢ ಶಾಲೆ ಮಾಣಿಲ ಇಲ್ಲಿನ ವಿದ್ಯಾರ್ಥಿನಿಯರಾದ ಧನುಶ್ರೀ, ರೂಪಶ್ರೀ, ಶ್ರುತಿ, ರಕ್ಷಿತಾ ರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಮಾಣಿಲ ಗ್ರಾಮದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುರುವ, ವೇಣುಗೋಪಾಲ ಹಿರಿಯ ಪ್ರಾಥಮಿಕ ಶಾಲೆ ಪಕಳಕುಂಜ ಮತ್ತು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಕಾಮಜಾಲು ಇಲ್ಲಿನ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣವನ್ನು ಪಡೆಯುತ್ತಿರುವ 130 ಮಂದಿ ಶಾಲಾ ಮಕ್ಕಳಿಗೆ ಪುಸ್ತಕವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಮೀಕ್ಷಾ ವೈಯಕ್ತಿಕ ಗೀತೆಯನ್ನು ಹಾಡಿದರು. ಜಯರಾಮ ಬಿ, ರಂಜಿತ್ ದಂಡೆಪ್ಪಾಡಿ, ಚೇತನಾ ಹಾಗೂ ಮಿಥುನ್ ಕುಮಾರ್ ಕೆ. ಸನ್ಮಾನ ಪತ್ರ ವಾಚಿಸಿದರು. ಮಾತೃಭೂಮಿ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ಯಶಸ್ ಕೆ.ಎಸ್. ಸ್ವಾಗತಿಸಿದರು. ಸಮೀಕ್ಷಾ, ಶ್ರದ್ಧಾ ಮತ್ತು ಸಾನಿಧ್ಯ ಪ್ರಾರ್ಥಿಸಿದರು. ಸುನಿತ್ ಕುಮಾರ್ ಧನ್ಯವಾದ ಸಮರ್ಪಿಸಿ, ರೇಖಾ ಕಾರ್ಯಕ್ರಮ ನಿರೂಪಿಸಿದರು.