ಪುತ್ತೂರು: ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿಯ ನಾಗದೇವರ ಸನ್ನಿಧಿಯಲ್ಲಿ 22ನೇ ವಾರ್ಷಿಕ ಮಹಾಪೂಜೆ ಮಾ.19ರಂದು ಕೀರ್ತಿಶೇಷ ಬ್ರಹ್ಮಶ್ರೀ ಕೇಶವ ಜೋಗಿತ್ತಾಯರವರ ಪುತ್ರ ವೇ ಮೂ ಅನಂತರಾಮ ಜೋಗಿತ್ತಾಯ ಅವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ನಾಗದೇವರಿಗೆ ಬೆಳ್ಳಿಯ ಕವಚ ಸಮರ್ಪಣೆ ಮಾಡಲಾಯಿತು.
ಬೆಳಿಗ್ಗೆ ನಾಗತಂಬಿಲ, ಆಶ್ಲೇಷ ಬಲಿ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಈ ವೇಳೆ ಭಜನಾ ಕಾರ್ಯಕ್ರಮ ನಡೆಯಿತು. ಸೇವಾ ಪ್ರಸಾದ ಮಾಡಿದ ಭಕ್ತರಿಗೆ ಸಂಕಲ್ಪ ಮೂಲಕ ಪ್ರಾರ್ಥನೆ ಮಾಡಿ ಪ್ರಸಾದ ವಿತರಿಸಲಾಯಿತು. ಮಧ್ಯಾಹ್ನ ಮಹಾಪೂಜೆಯ ಬಳಿಕ ಭಕ್ತರಿಗೆ ಅನ್ನಪ್ರಸಾದ ವಿತರಣೆ ನಡೆಯಿತು.
ಸುಮಾರು 6ಸಾವಿರ ಮಂದಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಈಶ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಅನ್ನಪ್ರಸಾದ ವಿತರಣೆಯಲ್ಲಿ ಸ್ವಯಂ ಸೇವಕರಾಗಿ ಪಾಲ್ಗೊಂಡರು.

ನೆಲ್ಲಿಕಟ್ಟೆ ನಿವಾಸಿ ಶಶಿಕಲಾ ಮತ್ತು ಸುಂದರ ಪೂಜಾರಿ ದಂಪತಿ ಶ್ರೀನಾಗ ದೇವರಿಗೆ ಬೆಳ್ಳಿಯ ಕವಚ ಸಮರ್ಪಣೆ ಮಾಡಿದರು.
ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿ ಬಳಿಕ ಮೆರವಣಿಗೆಯಲ್ಲಿ ಕವಚವನ್ನು ತಂದು ಶ್ರೀ ದೇವರಿಗೆ ಸಮರ್ಪಣೆ ಮಾಡಲಾಯಿತು.
ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ವಿನಯ ಸುವರ್ಣ, ದಿನೇಶ್ ಪಿ.ವಿ ಮತ್ತು ನೆಲ್ಲಿಕಟ್ಟೆ ನಾಗ ದೇವರ ಸನ್ನಿಧಿ ಸಮಿತಿಯ ಅಧ್ಯಕ್ಷ ಸ್ಯಾಕ್ರೋಫೋನ್ ವಾದಕ ಪಿ.ಕೆ.ಗಣೇಶ್, ದೇವತಾ ಸಮಿತಿ ಅಧ್ಯಕ್ಷ ಅಭಿಜಿತ್ ಶೆಟ್ಟಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.