ಕಡಬ, ಜೂನ್ 15: ಕಡಬ ತಾಲೂಕಿನ ಕೊಯಿಲ ಹಾಗೂ ರಾಮಕುಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಳಿತ್ತಡಿ–ಏಣಿತ್ತಡ್ಕ–ಕುದುಲೂರು ಸಂಪರ್ಕ ರಸ್ತೆಯಲ್ಲಿನ ಅಪಾಯಕಾರಿ ಹೊಂಡಗಳನ್ನು ಭಾನುವಾರ ಸ್ಥಳೀಯರು ಶ್ರಮದಾನದ ಮೂಲಕ ಮುಚ್ಚಿ ಸಂಚಾರಕ್ಕೆ ಅನುಕೂಲ ಕಲ್ಪಿಸಿ ಮಾದರಿ ಕಾರ್ಯ ನಡೆಸಿದರು.
ಗೋಳಿತ್ತಡಿಯಿಂದ ತ್ರಿವೇಣಿ ಸರ್ಕಲ್‌ವರೆಗೆ ಸುಮಾರು 2.5 ಕಿ.ಮೀ. ದೂರದ ರಸ್ತೆಯಲ್ಲಿ ಅನೇಕ ಹೊಂಡಗಳು ನಿರ್ಮಾಣಗೊಂಡು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೊಯಿಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚಿದಾನಂದ ಪಾನ್ಯಾಲು ಅವರ ನೇತೃತ್ವದಲ್ಲಿ ರಸ್ತೆ ದುರಸ್ತಿಗಾಗಿ ವಾಟ್ಸ್ಆಪ್ ಗುಂಪು ರಚಿಸಿ ಸಾರ್ವಜನಿಕರಿಂದ ಆರ್ಥಿಕ ನೆರವು ಕೋರಲಾಗಿತ್ತು. ದಾನಿಗಳ ಸಹಕಾರದಿಂದ ರಸ್ತೆ ಬದಿಯ ಪೊದೆ ಹಾಗೂ ಮರಗಳ ತೆರವು, ಚರಂಡಿ ನಿರ್ಮಾಣ ಮತ್ತು ಹೊಂಡ ಮುಚ್ಚುವ ಕಾರ್ಯಗಳನ್ನು ಕೈಗೊಳ್ಳಲಾಯಿತು.
ಕಳೆದ ಬುಧವಾರ ಯಂತ್ರಗಳ ಸಹಾಯದಿಂದ ರಸ್ತೆ ಬದಿಯ ಸ್ವಚ್ಛತಾ ಕಾರ್ಯ ಆರಂಭಗೊಂಡಿದ್ದು, ಭಾನುವಾರ ಬೆಳಗ್ಗೆಯಿಂದ ಸಂಜೆವರೆಗೆ ಸ್ಥಳೀಯರು ಮಣ್ಣು ಹಾಗೂ ಜಲ್ಲಿಕಲ್ಲುಗಳನ್ನು ತುಂಬಿಸಿ ಹೊಂಡ ಮುಚ್ಚುವ ಕಾರ್ಯದಲ್ಲಿ ತೊಡಗಿಕೊಂಡರು.
ಈ ರಸ್ತೆ ಮೂಲಕ ಏಣಿತ್ತಡ್ಕ, ಕುದುಲೂರು, ಸಬಳೂರು, ಕಕ್ವೆ, ಪರಂಗಾಜೆ, ಕೊಲ್ಯ ಹಾಗೂ ಸಂಕೇಶ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ನಿತ್ಯ ನೂರಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಮಳೆಗಾಲದ ಆರಂಭದಲ್ಲೇ ತೇಪೆ ಕಾಮಗಾರಿಗಳು ಹಾಳಾಗಿ ಹೊಂಡಗಳು ಮರುಕಳಿಸುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಳೆದ ಮೂರು ದಶಕಗಳಿಂದ ರಸ್ತೆ ಸಮಗ್ರ ಅಭಿವೃದ್ಧಿ ಕಾಣದೆ ತಾತ್ಕಾಲಿಕ ದುರಸ್ತಿ ಕಾಮಗಾರಿಗಳಲ್ಲೇ ಸೀಮಿತವಾಗಿದೆ ಎಂಬ ಅಸಮಾಧಾನವೂ ವ್ಯಕ್ತವಾಗಿದೆ.
ಸುಮಾರು 30 ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ರಸ್ತೆಗೆ ಎಂಟು ವರ್ಷಗಳ ಹಿಂದೆ ನಾಬಾರ್ಡ್ ಯೋಜನೆಯಡಿ ರೂ.34 ಲಕ್ಷ ವೆಚ್ಚದಲ್ಲಿ ಮರುಡಾಮರೀಕರಣ ಮಾಡಲಾಗಿತ್ತು. ನಂತರ ವಿವಿಧ ಹಂತಗಳಲ್ಲಿ ತೇಪೆ ಕಾಮಗಾರಿಗಳು ನಡೆದಿದ್ದರೂ ರಸ್ತೆ ಮತ್ತೆ ಹೊಂಡಮಯವಾಗಿದೆ.
ಇದೇ ವೇಳೆ ಗೋಳಿತ್ತಡಿಯಿಂದ ಸುಮಾರು 800 ಮೀಟರ್ ರಸ್ತೆ ಡಾಮರೀಕರಣಕ್ಕೆ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಶಾಸಕಿ ಭಾಗೀರಥಿ ಮುರುಳ್ಯ ಅವರ ಶಿಫಾರಸಿನಂತೆ ರೂ.40 ಲಕ್ಷ ಅನುದಾನ ಬಿಡುಗಡೆಯಾಗಿದ್ದರೂ ಕಾಮಗಾರಿ ಇನ್ನೂ ಆರಂಭವಾಗಿಲ್ಲ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಮೂಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಉಪವಿಭಾಗದ ಕಾರ್ಯಪಾಲಕ ಸಹಾಯಕ ಎಂಜಿನಿಯರ್ ಭರತ್ ಬಿ.ಎಂ., “ಮಧ್ಯಪ್ರಾಚ್ಯದ ಯುದ್ಧದ ಪರಿಣಾಮ ಆರಂಭದಲ್ಲಿ ಡಾಂಬರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಕಾಮಗಾರಿ ಆರಂಭಿಸಲು ಸಾಧ್ಯವಾಗಲಿಲ್ಲ. ಇದೀಗ ಡಾಂಬರು ಲಭ್ಯವಿದ್ದರೂ ಮಳೆಗಾಲದ ಕಾರಣ ರಸ್ತೆ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ಮಳೆಯ ಪ್ರಮಾಣ ಕಡಿಮೆಯಾದ ಬಳಿಕ ಡಾಮರೀಕರಣ ಕಾಮಗಾರಿ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ಕೊಯಿಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚಿದಾನಂದ ಪಾನ್ಯಾಲು ಮಾತನಾಡಿ, “ಮಳೆಗಾಲದಲ್ಲಿ ರಸ್ತೆ ಸಂಚಾರಯೋಗ್ಯವಾಗಿರಲು ಹೊಂಡ ಮುಚ್ಚುವ ಹಾಗೂ ರಸ್ತೆ ಬದಿಯ ಪೊದೆ ತೆರವು ಮತ್ತು ಚರಂಡಿ ನಿರ್ಮಾಣಕ್ಕಾಗಿ ಸಾರ್ವಜನಿಕರ ಸಹಕಾರ ಕೋರಲಾಗಿತ್ತು. ದಾನಿಗಳು ಹಾಗೂ ಸ್ಥಳೀಯರ ಉತ್ತಮ ಸ್ಪಂದನೆಯಿಂದ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು” ಎಂದು ಹೇಳಿದರು.
ಸ್ಥಳೀಯರು ರಸ್ತೆ ಸಂಪೂರ್ಣವಾಗಿ ನವೀಕರಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.


























