ಬಂಟ್ವಾಳ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಗೆ 2 ವರ್ಷ 6 ತಿಂಗಳ ಜೈಲು ಶಿಕ್ಷೆ ಹಾಗೂ ₹40 ಸಾವಿರ ದಂಡ ವಿಧಿಸಿ ಮಂಗಳೂರಿನ ವಿಶೇಷ ತ್ವರಿತ ನ್ಯಾಯಾಲಯ (FTSC-I) ತೀರ್ಪು ನೀಡಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2025ರ ಜೂನ್ 23ರಂದು ನಡೆದಿದ್ದ ಘಟನೆಗೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಸಂಖ್ಯೆ 79/2025 ದಾಖಲಿಸಲಾಗಿತ್ತು. ಪ್ರಕರಣದಲ್ಲಿ ಪೋಕ್ಸೋ ಕಾಯ್ದೆ-2012ರ ಕಲಂ 11 ಮತ್ತು 12 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 75(1)(ii) ಮತ್ತು 79ರಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಅಂದಿನ ತನಿಖಾಧಿಕಾರಿಗಳಾದ ಪಿಎಸ್‌ಐ ಕೀರಪ್ಪ ಘಟಕಾಂಬಳೆ ಹಾಗೂ ಪಿಎಸ್‌ಐ ಕೃಷ್ಣಕಾಂತ ಪಾಟೀಲ್ ನಡೆಸಿ, ಮಣಿನಾಲ್ಕೂರು ನಿವಾಸಿ ಮೋನಪ್ಪ ನಾಯ್ಕ (52) ವಿರುದ್ಧ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ FTSC-I ನ್ಯಾಯಾಲಯದ ನ್ಯಾಯಾಧೀಶ ಮೋಹನ್ ಜೆ.ಎಸ್. ಅವರು ಜುಲೈ 31, 2026ರಂದು ಆರೋಪಿಯನ್ನು ತಪ್ಪಿತಸ್ಥನೆಂದು ಘೋಷಿಸಿ ವಿವಿಧ ಕಲಂಗಳಡಿ ಶಿಕ್ಷೆ ವಿಧಿಸಿದರು.
ನ್ಯಾಯಾಲಯವು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳು ಹಾಗೂ ಪೋಕ್ಸೋ ಕಾಯ್ದೆಯ ಕಲಂ 12ರಡಿ ಪ್ರತ್ಯೇಕ ಶಿಕ್ಷೆಗಳನ್ನು ವಿಧಿಸಿದ್ದು, ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ (Concurrent) ಜಾರಿಯಾಗುವಂತೆ ಆದೇಶಿಸಿದೆ. ಇದರಂತೆ ಆರೋಪಿಗೆ ಒಟ್ಟು 2 ವರ್ಷ 6 ತಿಂಗಳ ಜೈಲು ಶಿಕ್ಷೆ ಹಾಗೂ ₹40 ಸಾವಿರ ದಂಡ ವಿಧಿಸಲಾಗಿದೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಸಹನಾದೇವಿ ಸಮರ್ಥವಾಗಿ ವಾದ ಮಂಡಿಸಿದ್ದರು.



























