ಕಡಬ: ಕಡಬ ಪೇಟೆಯ ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕರನ್ನು ಸೇರಿಸಿ ನಿಷೇಧಿತ ಹಣ ಪರಿಚಲನಾ ಯೋಜನೆಯ ಮೂಲಕ ಹಣ ಸಂಗ್ರಹಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಕಡಬ ಪೊಲೀಸರು ಕಾರ್ಯಾಚರಣೆ ನಡೆಸಿ ಜಾಲವನ್ನು ಪತ್ತೆಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಮಾಲೀಕರು ಹಾಗೂ ಸ್ಥಳೀಯ ಏಜೆಂಟರು ಸೇರಿದಂತೆ ಎಂಟು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಆಗಸ್ಟ್ 23ರಂದು ಬೆಳಗ್ಗೆ ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕರನ್ನು ಸೇರಿಸಿ ಅಕ್ರಮ ಹಣ ಸಂಗ್ರಹಣೆ ಸಂಬಂಧ ಸಭೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಕಡಬ ಪೊಲೀಸ್ ಠಾಣೆಯ ಗುಪ್ತವಾರ್ತೆ ಸಿಬ್ಬಂದಿಗೆ ಲಭಿಸಿತ್ತು. ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ, ಹಾವೇರಿ ಮೂಲದ ಕಿಂಗ್ಸ್ ಬಜಾರ್ (KINGS Bazaar) ಸಂಸ್ಥೆಯ ಹೆಸರಿನಲ್ಲಿ ಸಾರ್ವಜನಿಕರನ್ನು ಸದಸ್ಯರನ್ನಾಗಿ ನೋಂದಾಯಿಸುವ ಚಟುವಟಿಕೆ ನಡೆಯುತ್ತಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಸ್ಥೆಯಲ್ಲಿ ಸದಸ್ಯತ್ವ ಪಡೆದು ಹಣ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ದೊರೆಯಲಿದೆ, ಬೆಲೆಬಾಳುವ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಪಡೆಯಬಹುದು ಹಾಗೂ ಇತರರನ್ನು ಸದಸ್ಯರನ್ನಾಗಿ ಸೇರ್ಪಡೆಗೊಳಿಸಿದರೆ ಪ್ರತಿದಿನ ಕಮಿಷನ್ ನೀಡಲಾಗುತ್ತದೆ ಎಂದು ಆಮಿಷವೊಡ್ಡಿ ಸಾರ್ವಜನಿಕರಿಂದ ಹಣ ಸಂಗ್ರಹಿಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.
ಪ್ರಕರಣದಲ್ಲಿ ಕಿಂಗ್ಸ್ ಬಜಾರ್ ಸಂಸ್ಥೆಯ ಮಾಲೀಕರು ಸೇರಿದಂತೆ ಸುಬ್ರಹ್ಮಣ್ಯ ಶಾಗ್ರಿತ್ತಾಯ (50), ಗುರುಮೂರ್ತಿ (54), ಸುರೇಶ್ ಆರ್. (55), ಬಾಲಕೃಷ್ಣ ಪಿ.ಹೆಚ್. (42), ಕಿರಣ್ ಕುಮಾರ್ (21), ಶ್ರೀನಾಥ್ (48) ಹಾಗೂ ಸಂದೇಶ್ ಪುತ್ತೂರು ಸೇರಿದಂತೆ ಎಂಟು ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ಸಾರ್ವಜನಿಕರಿಗೆ ಹೆಚ್ಚಿನ ಲಾಭದ ಆಮಿಷವೊಡ್ಡಿ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 100/2026ರಂತೆ Prize Chits and Money Circulation Schemes (Banning) Act, 1978ರ ಕಲಂ 4, 5 ಮತ್ತು 6ರ ಅಡಿಯಲ್ಲಿ ಸ್ವಯಂಪ್ರೇರಿತ (Suo Motu) ಪ್ರಕರಣ ದಾಖಲಿಸಲಾಗಿದೆ.
ಠಾಣಾಧಿಕಾರಿ ಜಂಬುರಾಜ್ ಮಹಾಜನ್ ಅವರ ನೇತೃತ್ವದಲ್ಲಿ ಪ್ರಕರಣದ ತನಿಖೆ ಮುಂದುವರಿದಿದೆ.




























