ಬೆಳ್ತಂಗಡಿ: ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ದಿಢೀರ್ ಪ್ರಜ್ಞೆ ತಪ್ಪಿ ಅಸ್ವಸ್ಥರಾಗಿದ್ದು, ಬಸ್ ಚಾಲಕ ಮತ್ತು ನಿರ್ವಾಹಕ ಬಸ್ಸನ್ನೇ ನೇರವಾಗಿ ಆಸ್ಪತ್ರೆಗೆ ಚಲಾಯಿಸಿ ಜೀವ ಉಳಿಸಿ ಸಮಯಪ್ರಜ್ಞೆ ಹಾಗೂ ಮಾನವೀಯತೆ ಮೆರೆದ ಘಟನೆ ಮಂಗಳವಾರ ನಡೆದಿದೆ.
ದಾವಣಗೆರೆಯಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಅ.6ರ ಸಂಜೆ ಸುಮಾರು 4 ಗಂಟೆಗೆ ಈ ಘಟನೆ ಸಂಭವಿಸಿದೆ. ಬಸ್ಸಿನಲ್ಲಿದ್ದ ಮಹಿಳೆಯೊಬ್ಬರು ಏಕಾಏಕಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ಮಾತನಾಡಲು ಅಥವಾ ದೇಹವನ್ನು ಚಲಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರು. ಇದನ್ನು ಗಮನಿಸಿದ ಸಹಪ್ರಯಾಣಿಕರು ತಕ್ಷಣವೇ ಬಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಾಲಕ ಕಿರಣ್ ಹಾಗೂ ನಿರ್ವಾಹಕ ಸಂತೋಷ್ ಸಂಗಪ್ಪ ಗೌಡ ಅವರು ತಕ್ಷಣವೇ ಕಾರ್ಯಪ್ರವೃತ್ತರಾದರು. ಬಸ್ಸು ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ತಲುಪುತ್ತಿದ್ದಂತೆಯೇ, ಮಾರ್ಗ ಬದಲಾಯಿಸಿ ಸಮೀಪದಲ್ಲೇ ಇದ್ದ ಶ್ರೀ ಕೃಷ್ಣ ಆಸ್ಪತ್ರೆಗೆ ಬಸ್ಸನ್ನು ನೇರವಾಗಿ ಕೊಂಡೊಯ್ದರು.
ಮಹಿಳೆಗೆ ತಕ್ಷಣವೇ ತುರ್ತು ವೈದ್ಯಕೀಯ ಚಿಕಿತ್ಸೆ ಸಿಗುವಂತೆ ನೋಡಿಕೊಂಡರು.ಈ ತುರ್ತು ಸಂದರ್ಭದಲ್ಲಿ ಸ್ಥಳೀಯರಾದ ಅಶ್ರಫ್ ಚಾರ್ಮಾಡಿ, ಫಾರೂಕ್ ಕಕ್ಕಿಂಜೆ ಹಾಗೂ ನೌಫಲ್ ಕಕ್ಕಿಂಜೆ ಅವರು ಕೂಡ ಮಹಿಳೆಯ ನೆರವಿಗೆ ನಿಂತು ಸಾಥ್ ನೀಡಿದರು.ಅಸ್ವಸ್ಥಗೊಂಡ ಪ್ರಯಾಣಿಕರನ್ನು ಬಾಳೆಹೊನ್ನೂರು ನಿವಾಸಿ ಅನ್ನಪೂರ್ಣ ಎಂದು ಗುರುತಿಸಲಾಗಿದೆ. ಪ್ರಸ್ತುತ ಕಕ್ಕಿಂಜೆಯ ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.


























